ದಿಲ್ಲಿಯಲ್ಲಿ ಮುಂಗಾರು ಪೂರ್ವ ಮಳೆಯ ರೌದ್ರಾವತಾರ

Update: 2016-05-30 14:51 GMT

ಹೊಸದಿಲ್ಲಿ, ಮೇ 30: ನಿನ್ನೆ ರಾತ್ರಿಯಿಡೀ ಸುರಿದ ಗುಡುಗು ಸಹಿತ ಭಾರೀ ಮಳೆಗೆ ಮನೆಯೊಂದರ ಛಾವಣಿ ಕುಸಿದು ಮಗುವೊಂದು ಅಸು ನೀಡಿದೆ. ಮುಂಗಾರು ಪೂರ್ವ ಮಳೆಯು ಉತ್ತರ ಭಾರತದಾದ್ಯಂತ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ವಿಮಾನಗಳ ಸಂಚಾರಕ್ಕೆ ಅಡಚಣೆಯಾಗಿದೆ. ವಿಮಾನ ನಿಲ್ದಾಣಗಳು ಜಿಲಾವೃತವಾಗಿವೆ. ಪ್ರಧಾನಿ ನರೇಂದ್ರ ಮೋದಿ ಜೈಪುರ ವಿಮಾನ ನಿಲ್ದಾಣದಲ್ಲಿ ಒಂದು ತಾಸಿಗೂ ಹೆಚ್ಚುಕಾಲ ಸಿಲುಕಿಕೊಂಡರು.

ಉತ್ತರ ಭಾರತದ ಕೆಲವು ಭಾಗಗಳಲ್ಲಿ 50 ಡಿಗ್ರಿ ಸೆಂಟಿಗ್ರೆಡ್ ತಲುಪಿದ್ದ ಭಾರೀ ತಾಪಮಾನದಿಂದ ಈ ಮುಂಗಾರು ಪೂರ್ವ ಮಳೆ ಮುಕ್ತಿ ನೀಡಿದೆಯಾದರೂ, ಸಾವು ಹಾಗೂ ವಿನಾಶವನ್ನೂ ಉಂಟು ಮಾಡಿದೆ. ಭಾರೀ ಮಳೆಯಿಂದಾದ ಭೂ ಕುಸಿತದಿಂದ ಕಳೆದ 48 ತಾಸುಗಳಲ್ಲಿ ಉತ್ತರಾಖಂಡದಲ್ಲಿ ಕನಿಷ್ಠ ಐವರು ಸಾವಿಗೀಡಾಗಿದ್ದಾರೆ.

ದಿಲ್ಲಿಯ ಮೋತಿಯಾಖಾನ್ ಪ್ರದೇಶದಲ್ಲಿ ನಿದ್ರಿಸುತ್ತಿದ್ದವರ ಮೇಲೆ ಛಾವಣಿಯ ತಗಡು ಬಿದ್ದು ಎರಡುವರೆ ವರ್ಷದ ಮಗುವೊಂದು ಮೃತಪಟ್ಟಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಹೆಚ್ಚಿನ ವಿವರ ಲಬ್ಯವಾಗಿಲ್ಲ.

ಚಾಂದನಿ ಚೌಕ್‌ನ ಫತೇಪುರಿ ಪ್ರದೇಶದಲ್ಲಿ ಅಂಚೆಕಚೇರಿಯೊಂದರ ಗೋಡೆ ಕುಸಿದು ಬಿದ್ದು. ಹಲವು ವಾಹನಗಳು ಜಗರಿಗೊಂಡಿವೆ.

ಗುಜರಾತ್‌ನಿಂದ ತೇವದಿಂದ ಕೂಡಿದ ಗಾಳಿ ಹಾಗೂ ಬಂಗಾಕೊಲ್ಲಿಯಿಂದ ಬೀಸುವ ಪೂರ್ವ ಮಾರುತದಿಂದಾಗಿ ಹವಾಮಾನ ವೈಪರೀತ್ಯ ಉಂಟಾಗಿ ಬಿರುಗಾಳಿಯಿಂದ ಕೂಡಿದ ಗುಡುಗು ಸಹಿತ ಮಳೆ ಸುರಿಯಬಹುದೆಂಬ ಎಚ್ಚರಿಕೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.

ಈ ರೀತಿ ಸಾಮಾನ್ಯವಾಗಿ ಆಗುವುದಿಲ್ಲವೆಂದು ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಬಿ.ಪಿ.ಯಾದವ್ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಪ್ರಧಾನಿಯ ವಿಮಾವವನ್ನು ಅನಿವಾರ್ಯವಾಗಿ ಜೈಪುರದಲ್ಲಿ ಇಳಿಸಿಬೇಕಾಯಿತು. ಅವರು ಒಂದು ತಾಸಿಗಿಂತಲೂ ಹೆಚ್ಚುಕಾಲ ಟಾರ್‌ಮ್ಯಾಕ್‌ನಲ್ಲೇ ಕಾಯಬೇಕಾಯಿತು. ಅಂತಿಮವಾಗಿ ಮಧ್ಯರಾತ್ರಿಯ ಬಳಿಕ ವಿಮಾನ ದಿಲ್ಲಿಯಲ್ಲಿಳಿಯಿತು.

 ಮಧ್ಯರಾತ್ರಿಯ ಬಳಿಕದ 2 ಗಂಟೆಯವರೆಗೆ ದಿಲ್ಲಿಯಲ್ಲಿಳಿಯ ಬೇಕಾಗಿದ್ದ ಕನಿಷ್ಠ 40 ವಿಮಾನಗಳನ್ನು ಬೇರಡೆಗೆ ಕಳುಹಿಸ ಬೇಕಾಯಿತೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ನೆವಾರ್ಕ್‌ನಿಂದ ದಿಲ್ಲಿಗೆ ಆಗಮಿಸುತ್ತಿದ್ದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನವೊಂದನ್ನು ಪ್ರತಿಕೂಲ ಹವಾಮಾನದ ಕಾರಣ ಮುಂಬೈಗೆ ಕಳುಹಿಸಲಾಯಿತು. ಅದರೊಳಗಿದ್ದ ಸುಮಾರು 300 ಪ್ರಯಾಣಿಕರು ವಿಮಾನದಲ್ಲೇ ರಾತ್ರಿಯನ್ನು ಕಳೆದರು.

ರಾತ್ರಿಯಿಡೀ ಸುರಿದ ಮಳೆ ಅಮೃತಸರ ಮಳೆ ಅಮೃತಸರ ವಿಮಾನ ನಿಲ್ದಾಣದಲ್ಲಿ ಅನೇಕ ಸಣ್ಣ ವಿಮಾನಗಳಿಗೆ ಹಾನಿ ಮಾಡಿದೆ. ನಿರ್ಗಮನ ಲಾಂಜ್ ನೀರಿನಿಂದ ತುಂಬಿತ್ತೆಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಗಾಳಿ ಸಹಿತ ಮಳೆಯಿಂದಾಗಿ ಹಲವಾರು ಮರಗಳು ಉರುಳಿ ಬಿದ್ದು, ಪ್ರಧಾನ ರಸ್ತೆಗಳಲ್ಲಿ ತಡೆಯಾಗಿದೆ. ಇದರಿಂದ ಭಾರೀ ವಾಹನ ಜಂಗುಳಿಯುಂಟಾಗಿ ಜನರು ಕಚೇರಿ ಹಾಗೂ ಕೆಲಸ ಕಾರ್ಯಗಳಿಗೆ ಹೋಗಲು ಪರದಾಡುವಂತಾಯಿತು.

ಮುಂಜಾನೆ 8:30ರವರೆಗೆ ಸಫ್ದರ್ ಜಂಗ್‌ನಲ್ಲಿ 0.4 ಮೀ.ಮೀ. ಪಾಲಂನಲ್ಲಿ 3.2 ಮೀ.ಮೀ. ರಿಜ್‌ನಲ್ಲಿ 0.4 ಮೀ.ಮೀ. ಹಾಗೂ ಆಯ ನಗರದಲ್ಲಿ 3 ಮೀ.ಮೀ ಮಳೆ ದಾಖಲಾಗಿದೆಯೆಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಿಲ್ಲಿ-ಗುರ್ಗಾಂವ್ ಎಕ್ಸ್‌ಪ್ರೆಸ್ ವೇ, ಹಳೆ ದಿಲ್ಲಿ-ಗುರ್ಗಾಂವ್ ರಸ್ತೆ, ಸೆಕ್ಟರ್ 22/23 ರಸ್ತೆ; ಪಾಲಂವಿಹಾರ್ ಹಾಗೂ ಹಳೆ ಗುರ್ಗಾಂವ್‌ನ ಅನೇಕ ಕಡೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಹಳೆ ಹಾಗೂ ಹೊಸ ಗುರ್ಗಾಂವ್‌ನ ಅನೇಕ ಕಡೆಗಳಲ್ಲಿ ವಿದ್ಯುತ್ ವೈಫಲ್ಯ ಉಂಟಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News