×
Ad

ಟಾಪ್ ಯುರೋಪಿಯನ್ ತಂಡಕ್ಕೆ ಆಡಿದ ಪ್ರಪ್ರಥಮ ಭಾರತೀಯ ಗುರ್ ಪ್ರೀತ್

Update: 2016-05-30 23:06 IST

ಹೊಸದಿಲ್ಲಿ, ಮೇ 30: ಭಾರತದ ಫುಟ್ಬಾಲ್ ತಂಡದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಯುರೋಪ್‌ನ ಅಗ್ರ ಲೀಗ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಯುರೋಪ್‌ನ ಅಗ್ರಲೀಗ್‌ನಲ್ಲಿ ಆಡಲಿರುವ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  ನಾರ್ವೆ ಪ್ರೀಮಿಯರ್ ಲೀಗ್‌ನಲ್ಲಿ ಸ್ಟಬೇಕ್ ಫುಟ್ಬಾಲ್ ಕ್ಲಬ್‌ನ್ನು ಪ್ರತಿನಿಧಿಸಿರುವ 24ರ ಹರೆಯದ ಸಂಧು ಕಳೆದ ರಾತ್ರಿ ನಡೆದ ಲೀಗ್ ಪಂದ್ಯದಲ್ಲಿ ಐಕೆ ಸ್ಟಾರ್ಟ್ ತಂಡದ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಲು ನೆರವಾಗಿದ್ದರು.
2004ರಲ್ಲಿ ಸ್ಟಬೇಕ್ ಎಫ್‌ಸಿಯೊಂದಿಗೆ ಸಹಿ ಹಾಕಿದ್ದ ಸಂಧು ನಾರ್ವೆ ಕಪ್‌ನಲ್ಲಿ ಈಗಾಗಲೇ 5 ಪಂದ್ಯಗಳನ್ನು ಆಡಿದ್ದರು. ಆದರೆ, ನಾರ್ವೆ ಪ್ರೀಮಿಯರ್ ಲೀಗ್‌ನಲ್ಲಿ ರವಿವಾರ ಮೊದಲ ಬಾರಿ ಆಡಿದ್ದರು.
‘‘ಯುರೋಪ್‌ನ ಅಗ್ರ ವಿಭಾಗದ ಲೀಗ್ ಪಂದ್ಯದಲ್ಲಿ ಆಡುತ್ತಿರುವ ಭಾರತದ ಮೊದಲ ಆಟಗಾರ ಎನಿಸಿಕೊಳ್ಳುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ’’ ಎಂದು ಸಂಧು ಟ್ವೀಟ್ ಮಾಡಿದ್ದಾರೆ.
ಯುರೋಪ್‌ನ ಹೆಚ್ಚಿನೆಲ್ಲಾ ಪ್ರದೇಶದಲ್ಲಿ ವರ್ಷದ ಈ ಸಮಯದಲ್ಲಿ ಲೀಗ್ ಪಂದ್ಯಗಳ ಋತು ಅಂತ್ಯವಾಗಿರುತ್ತದೆ. ವಿಭಿನ್ನ ಹವಾಗುಣದ ಹಿನ್ನೆಲೆಯಲ್ಲಿ ನಾರ್ವೆಯಲ್ಲಿ ಮಾರ್ಚ್‌ನಿಂದ ನವೆಂಬರ್ ತನಕ ಲೀಗ್ ಪಂದ್ಯಗಳು ನಡೆಯುತ್ತವೆ.
ಭಾರತ ತಂಡಕ್ಕೆ ಕಳೆದ ವರ್ಷ ಸ್ಟಿಫನ್ ಕಾನ್‌ಸ್ಟನ್‌ಸ್ಟೈನ್ ಕೋಚ್ ಆದ ಬಳಿಕ ಸಂಧು ಭಾರತೀಯ ಫುಟ್ಬಾಲ್ ತಂಡದ ನಂ.1 ಗೋಲ್‌ಕೀಪರ್ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News