×
Ad

‘ರಾ’ದ ಮಾಜಿ ಮುಖ್ಯಸ್ಥನ ಆಸ್ತಿ

Update: 2016-05-30 23:36 IST

ಹೊಸದಿಲ್ಲಿ, ಮೇ 30: ದೇಶದ ಪ್ರಧಾನ ಗುಪ್ತಚರ ಸಂಸ್ಥೆ, ಸಂಶೋಧನೆ ಹಾಗೂ ವಿಶ್ಲೇಷಣ ಘಟಕ(ರಾ) ಮಾಜಿ ಕಾರ್ಯದರ್ಶಿಯ ವಿರುದ್ಧದ ಅನಧಿಕೃತ ಆರೋಪದ ಕುರಿತು ತನಿಖೆ ನಡೆಸುವಂತೆ ವಿಶೇಷ ಸಿಬಿಐ ನ್ಯಾಯಾಲಯವೊಂದು ಸಿಬಿಐಗೆ ಆದೇಶ ನೀಡಿದೆ.

 ಈ ಹಿಂದೆ, ಆಗಿನ ‘ರಾ’ ಮುಖ್ಯಸ್ಥ ಎ.ಕೆ.ವರ್ಮಾನ ಆಸ್ತಿಯ ತನಿಖೆ ಮಾಡುವಂತೆ ತೀಸ್ ಹಜಾಂ ವಿಶೇಷ ನ್ಯಾಯಾಲಯವು 2013ರ ಫೆ.18ರಂದು ಆದೇಶ ನೀಡಿತ್ತು. ಅದನ್ನು ಸಿಬಿಐ ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಸಿತ್ತು. ಅದರ ಮನವಿಯನ್ನು ಹೈಕೋರ್ಟ್ ತಳ್ಳಿ ಹಾಕಿತ್ತು.
ಆ ಬಳಿಕ, ದೂರುದಾರ ‘ರಾ’ದ ಮಾಜಿ ಉದ್ಯೋಗಿ ಆರ್.ಕೆ.ಯಾದವ್ ಎಂಬವರು ಪಿ.ಸಿ.ಕಾಯ್ದೆಯ ಸೆ.13(1) (ಇ)ಯೊಂದಿಗೆ ಸೆ.13(2) ಹಾಗೂ ಐಪಿಸಿಯ ಸೆ.109ರನ್ವಯ ವಿಚಾರಣೆ ಎದುರಿಸುವುದಕ್ಕಾಗಿ ಆರೋಪಿಗೆ ಸಮನ್ಸ್ ನೀಡುವಂತೆ ಮನವಿ ಮಾಡಿದ್ದರೆಂದು ವಿಶೇಷ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಗರ್ಗ್ ತನ್ನ ಆದೇಶದಲ್ಲಿ ತಿಳಿಸಿದ್ದಾರೆ.
2010ರ ಸೆ.7ರಂದು ನ್ಯಾಯಾಲಯ ನೀಡಿದ್ದ ಆದೇಶದ ಬೆಂಬತ್ತಿದ್ದ ಯಾದವ್, ತನ್ನ ವಾದಕ್ಕೆ ಬೆಂಬಲವಾಗಿ ಒಟ್ಟು 13 ಸಾಕ್ಷಿಗಳನ್ನು ಪರಿಶೀಲಿಸಿದ್ದರೆಂದು ಅವರು ಹೇಳಿದ್ದಾರೆ.
ಈ ಸಾಕ್ಷಿಗಳು ಆರೋಪಿಯ ಅನೇಕ ಸ್ಥಿರ-ಚರ ಆಸ್ತಿಗಳಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ನೀಡಿದ್ದರು. ಆದರೆ, ‘ರಾ’ದ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ 1ನೆ ಆರೋಪಿಯು ಅಪಾರ ಪ್ರಮಾಣದ ಸ್ಥಿರ-ಚರ ಆಸ್ತಿಯನ್ನು ಹೊಂದಿದ್ದನೆಂಬುದಕ್ಕೆ ಖಚಿತವಾದ ಸಾಕ್ಷವನ್ನು ಒದಗಿಸಲು ದೂರುದಾರರು ವಿಫಲರಾಗಿದ್ದರೆಂದು ಗರ್ಗ್ ಹೇಳಿದ್ದಾರೆ.
 ಸುಪ್ರೀಂಕೋರ್ಟ್‌ನ ಆದೇಶವೊಂದನ್ನು ಪರಿಗಣಿಸಿದ ಅವರು, ದಂಡ ಪ್ರಕ್ರಿಯಾ ಸಂಹಿತೆಯ ಸೆ.202ರನ್ವಯ ಆರೋಪಿಯ ಆದಾಯ ಹಾಗೂ ಆಸ್ತಿಯ ಕುರಿತು ಪೊಲೀಸ್ ಅಧೀಕ್ಷಕನ ದರ್ಜೆಗೆ ಕಡಿಮೆಯಲ್ಲದ ಅಧಿಕಾರಿಯೊಬ್ಬನಿಂದ ‘ವಿಚಾರಣೆಯ ರೂಪದಲ್ಲಿ ತನಿಖೆ’ ನಡೆಸುವಂತೆ ಸಿಬಿಐ ನಿರ್ದೇಶಕರಿಗೆ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News