×
Ad

ಜರ್ಮನಿ ವಿಮಾನ ನಿಲ್ದಾಣದಲ್ಲಿ 2ನೆ ಮಹಾಯುದ್ಧ ಕಾಲದ ಬಾಂಬ್ ಪತ್ತೆ: ನಿಷ್ಕ್ರಿಯ

Update: 2016-05-30 23:43 IST

ಬರ್ಲಿನ್, ಮೇ 30: ಜರ್ಮನಿಯ ಹ್ಯಾನೋವರ್ ನಗರದ ವಿಮಾನ ನಿಲ್ದಾಣದಲ್ಲಿ ಎರಡನೆ ಮಹಾಯುದ್ಧ ಕಾಲದಲ್ಲಿ ಹಾಕಲಾಗಿದ್ದ ಅಮೆರಿಕದ ಬಾಂಬೊಂದನ್ನು ರವಿವಾರ ನಿಷ್ಕ್ರಿಯಗೊಳಿಸಲಾಗಿದೆ. ಈ ಕಾರ್ಯಾಚರಣೆಯ ವೇಳೆ ಹತ್ತಾರು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು.

 ರನ್‌ವೇ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮುನ್ನ ಪರಿಣತರು ಸ್ಥಳ ಪರಿಶೀಲನೆ ಕಾರ್ಯ ನಡೆಸಿದರು. ಈ ಅವಧಿಯಲ್ಲಿ ಎರಡು ಕಡೆಗಳಲ್ಲಿ ಕಾಂತೀಯ ವ್ಯತ್ಯಯ ಇರುವುದನ್ನು ಪರಿಣತರು ಪತ್ತೆಹಚ್ಚಿದರು. ಈ ಹಿನ್ನೆಲೆಯಲ್ಲಿ, ಭೂಮಿಯಡಿಯಲ್ಲಿ ಇರಬಹುದಾದ ಸಂಭಾವ್ಯ ಬಾಂಬ್‌ಗಳಿಗಾಗಿ ಶೋಧ ನಡೆಸಲು ಸ್ಥಳೀಯ ಅಧಿಕಾರಿಗಳು ಕಳೆದ ವಾರ ನಿರ್ಧರಿಸಿದ್ದರು.

ಈ ಉದ್ದೇಶಕ್ಕಾಗಿ ಒಂದು ಕಿಲೋಮೀಟರ್ ತ್ರಿಜ್ಯದಷ್ಟು ಸ್ಥಳವನ್ನು ಗುರುತಿಸಲಾಯಿತು ಹಾಗೂ 54 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು.

250 ಕೆಜಿ ತೂಕದ ಅಮೆರಿಕದ ಬಾಂಬೊಂದನ್ನು ಪರಿಣತರು ಅಗೆದು ನಿಷ್ಕ್ರಿಯಗೊಳಿಸಿದರು ಎಂದು ವಿಮಾನ ನಿಲ್ದಾಣ ಒಳಪಟ್ಟ ಲ್ಯಾಂಜನ್‌ಹ್ಯಾಗನ್ ಪುರಸಭೆ ತಿಳಿಸಿದೆ.

ಆದಾಗ್ಯೂ, ಎರಡನೆ ಶಂಕಿತ ವಸ್ತು ಲೋಹದ ಕೊಳವೆ ಆಗಿತ್ತು.

ಎರಡನೆ ವಿಶ್ವಯುದ್ಧ ಮುಗಿದು 70 ವರ್ಷಗಳು ಕಳೆದರೂ, ಜರ್ಮನಿಯ ನಗರಗಳಲ್ಲಿ ಸ್ಫೋಟಗೊಳ್ಳದ ಬಾಂಬ್‌ಗಳು ನೆಲವನ್ನು ಅಗೆಯುವಾಗ ಆಗಾಗ ಪತ್ತೆಯಾಗುತ್ತಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News