×
Ad

ವಿಶ್ವಸಂಸ್ಥೆ ಮುಖ್ಯಸ್ಥರು ದ.ಕೊರಿಯ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವರೇ?

Update: 2016-05-30 23:46 IST

ಸಿಯೋಲ್ (ದಕ್ಷಿಣ ಕೊರಿಯ), ಮೇ 30: ಮುಂದೆ ದಕ್ಷಿಣ ಕೊರಿಯದ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಲು ಸಾಧ್ಯವೇ ಎಂಬುದನ್ನು ತಿಳಿಯಲು ಪ್ರಸಕ್ತ ತಾನು ದೇಶದಲ್ಲಿ ಪ್ರವಾಸ ಕೈಗೊಂಡಿದ್ದೇನೆ ಎಂಬ ಊಹಾಪೋಹಗಳನ್ನು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ಸೋಮವಾರ ನಿರಾಕರಿಸಿದ್ದಾರೆ.

ಈ ವಿಷಯದ ಕುರಿತ ತನ್ನ ಹೇಳಿಕೆಯನ್ನು ಉತ್ಪ್ರೇಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತನ್ನ ಮಾತೃ ದೇಶದಲ್ಲಿ ಆರು ದಿನಗಳ ಪ್ರವಾಸ ಕೈಗೊಳ್ಳುವುದಕ್ಕಾಗಿ ಬಾನ್ ಕಳೆದ ವಾರ ಆಗಮಿಸಿದ್ದಾರೆ. ಅವರು 2017ರಲ್ಲಿ ನಡೆಯಲಿರುವ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಈ ಸಂದರ್ಭದಲ್ಲಿ ಹರಿದಾಡಿರುವುದನ್ನು ಸ್ಮರಿಸಬಹುದಾಗಿದೆ.

ಈ ವರ್ಷದ ಕೊನೆಯಲ್ಲಿ ಅವರು ವಿಶ್ವಸಂಸ್ಥೆಯ ತನ್ನ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.

ಓರ್ವ ಸಾಮಾನ್ಯ ನಾಗರಿಕ ನಾಗಿ ತಾನು ದಕ್ಷಿಣ ಕೊರಿಯಕ್ಕೆ ವಾಪಸ್ ಆದ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ತಾನು ‘‘ಸಲಹೆ’’ ಕೋರುವೆ ಎಂಬ ಹೇಳಿಕೆಯೊಂದನ್ನು ಅವರು ನೀಡಿದ್ದರು. ಇಷ್ಟೇ ಸಾಕಾಯಿತು. ಇದು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ಅವರು ನೀಡಿರುವ ಅತ್ಯಂತ ಸ್ಪಷ್ಟ ಸೂಚನೆ ಎಂಬುದಾಗ ಸ್ಥಳೀಯ ಮಾಧ್ಯಮಗಳು ವ್ಯಾಖ್ಯಾನಿಸಿದವು.

ಆದರೆ, ತನ್ನ ಹೇಳಿಕೆಗೆ ನೀಡಲಾಗಿರುವ ಅತಿರಂಜಿತ ತಿರುವಿನಿಂದ ತಾನು ಕಕ್ಕಾಬಿಕ್ಕಿಯಾಗಿದ್ದೇನೆ ಹಾಗೂ ತನ್ನ ಭೇಟಿಗೆ ವೈಯಕ್ತಿಕ ಅಥವಾ ರಾಜಕೀಯ ಆಯಾಮವಿಲ್ಲ ಎಂಬುದಾಗಿ ಬಾನ್ ಸೋಮವಾರ ಸ್ಪಷ್ಟೀಕರಣ ನೀಡಿದರು.‘‘ಇಲ್ಲಿನ ನನ್ನ ಚಟುವಟಿಕೆಗಳಿಗೆ ಅತಿ ವ್ಯಾಖ್ಯಾನ ನೀಡುವುದನ್ನು ಹಾಗೂ ಊಹಾಪೋಹ ನಡೆಸುವುದನ್ನು ನೀವು ನಿಲ್ಲಿಸುವಿರಿ ಎಂದು ನಾನು ಭಾವಿಸುತ್ತೇನೆ’’ ಎಂದು ದಕ್ಷಿಣದ ನಗರ ಗ್ಯಾಂಗ್ಜುನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News