455ನೆ ರ್ಯಾಂಕ್ ಗಳಿಸಿರುವ ದೇರಳಕಟ್ಟೆಯ ಸಲ್ವಾರಿಗೆ ಹೃದ್ರೋಗ ತಜ್ಞೆಯಾಗುವ ಗುರಿ

Update: 2016-05-31 12:25 GMT

ಮಂಗಳೂರು, ಮೇ 31: ಪ್ರಸಕ್ತ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ವೈದ್ಯಕೀಯ ವಿಭಾಗದಲ್ಲಿ ದೇರಳಕಟ್ಟೆಯ ಖತೀಜತ್ ಸಲ್ವಾ ಅವರು 455ನೆ ರ್ಯಾಂಕ್ ಗಳಿಸಿ ಉತ್ತಮ ಸಾಧನೆ ಮೆರೆದಿದ್ದಾರೆ.

ಹೃದ್ರೋಗ ತಜ್ಞೆಯಾಗುವ ಇರಾದೆ ಹೊಂದಿರುವ ಸಲ್ವಾ ಅವರು ದೇರಳಕಟ್ಟೆಯ ಎಂ.ಇಸ್ಮಾಯೀಲ್ ಮತ್ತು ಝುಲೈಕಾ ದಂಪತಿಯ ಪುತ್ರಿ.
ದ್ವಿತೀಯ ಪಿಯುಸಿಯಲ್ಲಿ 581 ಅಂಕ(96.83)ಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿರುವ ಸಲ್ವಾ ಅವರು ಕಣಚೂರು ಪಬ್ಲಿಕ್ ಸ್ಕೂಲ್‌ನಲ್ಲಿ ಸಿಬಿಎಸ್‌ಇ 10ನೆ ತರಗತಿಯಲ್ಲಿ 10 ಸಿಜಿಪಿಎ ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

ನಗರದ ಮಹೇಶ್ ಪಿಯು ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಲ್ವಾ ಕಾಲೇಜಿನಲ್ಲಿ ನೀಡುತ್ತಿದ್ದ ಟ್ಯೂಶನ್ ಹೊರತುಪಡಿಸಿದರೆ ಇತರ ಯಾವುದೇ ಟ್ಯೂಶನ್ ಪಡೆದಿಲ್ಲ.

‘‘ತನ್ನ ಕಾಲೇಜಿನಲ್ಲಿ ಸಿಇಟಿಗೆ ಟ್ಯೂಶನ್ ನೀಡುತ್ತಿದ್ದರು. ಅದು ಬಿಟ್ಟರೆ ಬೇರೆ ಯಾವುದೇ ಟ್ಯೂಶನ್ ಪಡೆದಿಲ್ಲ. ಆದರೆ ಪ್ರತಿನಿತ್ಯ 2- 3 ಗಂಟೆಗಳನ್ನು ಅಧ್ಯಯನಕ್ಕೆ ಮೀಸಲಿಡುತ್ತಿದ್ದೆ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಸಿಇಟಿಯಲ್ಲಿ 500ರೊಳಗಿನ ರ್ಯಾಂಕ್‌ನ ನಿರೀಕ್ಷೆ ಇತ್ತು. ದ್ವಿತೀಯ ಪಿಯುಸಿಯ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳಲ್ಲಿ ನಿರೀಕ್ಷಿತ ಅಂಕಗಳು ಲಭಿಸಿಲ್ಲ. ಈ ವಿಷಯಗಳ ಉತ್ತರ ಪತ್ರಿಕೆಯ ಪ್ರತಿಗಾಗಿ ಅರ್ಜಿ ಸಲ್ಲಿಸಿದ್ದೇನೆ’’ ಎಂದು ಅವರು ತಿಳಿಸಿದ್ದಾರೆ.

ಸಲ್ವಾ ಅವರ ತಂದೆ ಇಸ್ಮಾಯೀಲ್(ಮೊ.ಸಂ.: 9611258646) ಈ ಮೊದಲು ಗಲ್ಫ್‌ನಲ್ಲಿ ಸೇಲ್ಸ್‌ಮೆನ್ ಆಗಿ ದುಡಿಯುತ್ತಿದ್ದವರು ಎರಡು ವರ್ಷಗಳಿಂದ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಓರ್ವ ಸಹೋದರ ಎಂಜಿನಿಯರಿಂಗ್ ಮಾಡುತ್ತಿದ್ದಾರೆ. ಓರ್ವ ಸಹೋದರಿಗೆ ವಿವಾಹವಾಗಿದ್ದು, ಶಿಕ್ಷಣಕ್ಕೆ ಸಂಬಂಧಿಸಿ ಆಕೆ ನೆರವಾಗುತ್ತಿರುವುದಾಗಿ ಸಲ್ವಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News