ಪುತ್ತೂರು ಸರಕಾರಿ ಆಸ್ಪತ್ರೆಯ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ

Update: 2016-05-31 13:57 GMT

ಪುತ್ತೂರು, ಮೇ 31: ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 12 ಮಂದಿ ದಿನಕೂಲಿ ನೌಕರರು ಕಳೆದ ಎರಡು ವರ್ಷಗಳಿಂದ ನೀಡಲು ಬಾಕಿಯಿರುವ ಪಿಎಫ್ ಹಣವನ್ನು ನೀಡುವಂತೆ ಆಗ್ರಹಿಸಿ ಮಂಗಳವಾರ ದಿಢೀರ್ ಆಗಿ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸಿದರು.

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ 12 ಮಂದಿ ಹೊರಗುತ್ತಿಗೆ ಆಧಾರದಲ್ಲಿ ದಿನಕೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಗುತ್ತಿಗೆ ವಹಿಸಿಕೊಂಡಿದ್ದ ಲಕ್ಷ್ಮೀ ವೆಂಕಟೇಶ್ ಎಂಟರ್‌ಪ್ರೈಸಸ್ ಸಂಸ್ಥೆಯ ಗುತ್ತಿಗೆ ಅವಧಿ ಮಾರ್ಚ್ ತಿಂಗಳಿಗೆ ಕೊನೆಗೊಂಡಿದೆ. ಪ್ರಸ್ತುತ ವರ್ಷದ ಗುತ್ತಿಗೆ ಟೆಂಡರ್ ಪ್ರಕ್ರಿಯೆ ಇನ್ನೂ ನಡೆದಿಲ್ಲ ಎಂದು ದೂರಿರುವ ದಿನಕೂಲಿ ನೌಕರರು ಮುಂದೆ ನಾವು ಸಂಬಳ ನೀಡುವವರು ಯಾರು ಎಂದು ನಿರ್ಧಾರವಾದ ಬಳಿಕವೇ ಕೆಲಸಕ್ಕೆ ಹಾಜರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.

ದಿನಕೂಲಿ ನೌಕರರಾಗಿ ದುಡಿಯುತ್ತಿರುವವರ ಪೈಕಿ ಕೆ.ಎಸ್.ಗಣೇಶ್ ಎಂಬವರಿಗೆ 6ತಿಂಗಳ ಸಂಬಳ ಮತ್ತು ಬಪ್ಪಳಿಗೆಯ ಗಣೇಶ್‌ರಿಗೆ 2 ತಿಂಗಳ ಸಂಬಳ ಬಾಕಿಯಿದ್ದು, ಕಳೆದ 2 ವರ್ಷಗಳಿಂದ ಯಾರಿಗೂ ಪಿಎಫ್ ಹಣ ನೀಡಲಾಗಿಲ್ಲ. 2006-07ನೆ ಸಾಲಿನ ಪಿಎಫ್ ಕೂಡ ನೀಡಲು ಬಾಕಿ ಇದೆ ಎಂದು ಆರೋಪಿಸಿದ ಕಾರ್ಮಿಕರು ವ್ಯವಸ್ಥೆ ಸರಿಯಾಗದಿದ್ದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ದಿನಕೂಲಿ ನೌಕರ ಸುಧಾಕರ್‌ರ ನೇತೃತ್ವದಲ್ಲಿ ನೌಕರರಾದ ಪುರಂದರ್, ಗಣೇಶ್, ತಿಮ್ಮಪ್ಪ, ಸಂಜೀವ, ಗಣೇಶ್ ಬಪ್ಪಳಿಗೆ, ಸುಶೀಲಾ, ಸುಶೀಲಾ ಆನಂದ್, ಅಕ್ಕಮ್ಮ, ಬೇಬಿ, ಜಾನಕಿ, ಹೊನ್ನಮ್ಮ ಕೆಲಸ ಮಾಡದೆ ಪ್ರತಿಭಟಿಸಿದರು.

ದಿನಕೂಲಿ ನೌಕರರ ಪ್ರತಿಭಟನೆ ಮತ್ತು ಮನವಿಯ ಮೇರೆಗೆ ಸರಕಾರಿ ಆಸ್ಪತ್ರೆಗೆ ಆಗಮಿಸಿ ಆಸ್ಪತ್ರೆಯ ವೈದ್ಯರು ಹಾಗೂ ಕಾರ್ಮಿಕರ ಜೊತೆ ಸಮಸ್ಯೆಯ ಕುರಿತು ಮಾತುಕತೆ ನಡೆಸಿದ ಶಾಸಕಿ ಶಕುಂತಳಾ ಶೆಟ್ಟಿ, ಹೊರಗುತ್ತಿಗೆ ಟೆಂಡರ್ ವಿಳಂಬದ ಕುರಿತು ವೈದ್ಯಾಧಿಕಾರಿಗಳನ್ನು ಪ್ರಶ್ನಿಸಿದರು. ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಬೇಡಿ ಎಂದು ಅವರು ಅಧಿಕಾರಿಗಳನ್ನು ಎಚ್ಚರಿಸಿದರು. ಪ್ರಸ್ತುತ ವರ್ಷದ ಟೆಂಡರ್ ಪ್ರಕ್ರಿಯೆ ಆಗಿಲ್ಲ. ಈ ವರ್ಷದ ಟೆಂಡರ್‌ಗೆ ಮೂರು ಅರ್ಜಿಗಳು ಬಂದಿದ್ದು, ಈ ಪೈಕಿ ಒಬ್ಬರ ಅರ್ಜಿ ಅನರ್ಹವಾಗಿದ್ದು, ಉಳಿದ ಎರಡರಲ್ಲಿ ಒಂದನ್ನು ಅಂತಿಮಗೊಳಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಕಡತವನ್ನು ಒಂದು ತಿಂಗಳ ಹಿಂದೆಯೇ ಜಿಲ್ಲಾ ಆರೋಗ್ಯಾಧಿಕಾರಿಗೆ ಕಳುಹಿಸಿ ಕೊಡಲಾಗಿದೆ. ಆದರೆ ಜಿಲ್ಲಾಧಿಕಾರಿಗಳ ಸಹಿಯಾಗದೆ ಬಾಕಿ ಉಳಿದಿದೆ ಎಂದು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಯೋಗಾನಂದ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿ ಮಾತನಾಡಿದ ಶಾಸಕಿ, ಇಂದೇ ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿಗೆ ತೆರಳಿ ಟೆಂಡರ್ ಕಡತಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಸಹಿ ಮಾಡಿಸಿ ಅಂತಿಮಗೊಳಿಸಿ, ಅವರು ಮಾಡಿಕೊಡದಿದ್ದಲ್ಲಿ ತನಗೆ ಅಲ್ಲಿಂದಲೇ ತಿಳಿಸಿ ಎಂದು ಶಾಸಕಿಯವರು ಯೋಗಾನಂದ ಅವರಿಗೆ ಸೂಚಿಸಿದರು.

ಪಿಎಫ್ ಬಾಕಿಯ ಕುರಿತು ಸಹಾಯಕ ಆಡಳಿತಾಧಿಕಾರಿ ಯೋಗಾನಂದ ಅವರಲ್ಲಿ ಪ್ರಶ್ನಿಸಿದ ಶಾಸಕಿ, 2 ಲಕ್ಷ ರೂ.ವನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು ಏನು ಮಾಡುತ್ತಿದ್ದೀರಿ, ಇಬ್ಬರು ಕಾರ್ಮಿಕರಿಗೆ ಸಂಬಳ ಯಾಕೆ ಬಾಕಿಯಾಯಿತು ಎಂದು ಕೇಳಿದರು. ಗುತ್ತಿಗೆದಾರರ ಕಡೆಯಿಂದ ನೀಡಲಾದ ಚೆಕ್ ಅಮಾನ್ಯ ಪ್ರಕರಣದಿಂದಾಗಿ ಇಬ್ಬರು ಕಾರ್ಮಿಕರ ಸಂಬಳ ಬಾಕಿಯಾಗಿದೆ ಎಂದು ಯೋಗಾನಂದ ತಿಳಿಸಿದರು. ಈ ಸಂದರ್ಭದಲ್ಲಿ ದಿನ ಕೂಲಿ ಕಾರ್ಮಿಕರು, ಯೋಗಾನಂದ ನಮ್ಮ ದಾಖಲೆಗಳು ಸರಿಯಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅವರೇ ನಮಗೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ಶಾಸಕರ ಮುಂದೆ ದೂರಿಕೊಂಡರು. ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ಮಿಕರಿಗೆ ಸಮಸ್ಯೆ ಮಾಡಬೇಡಿ ಎಂದು ಶಾಸಕಿ ಎಚ್ಚರಿಸಿದರು.

ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದ ಶಾಸಕಿ ಕರ್ತವ್ಯಕ್ಕೆ ಇಂದೇ ಹಾಜರಾಗುವಂತೆ ದಿನಗೂಲಿ ನೌಕರರಿಗೆ ತಿಳಿಸಿದರು. ಆದರೆ ದಿನಗೂಲಿ ನೌಕರರು ಇಂದು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ. ಇಂದು ಏನಾಗುತ್ತದೋ ಎಂಬುವುದನ್ನು ನೋಡಿಕೊಂಡು ಮತ್ತೆ ನಿರ್ಧಾರಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. ಅದಕ್ಕೆ ಸಹಮತ ವ್ಯಕ್ತಪಡಿಸಿದ ಶಾಸಕಿಯವರು ಇಂದು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಆಡಳಿತ ವೈದ್ಯಾಧಿಕಾರಿಗೆ ಸೂಚಿಸಿದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್ ಮತ್ತು ಡಾ.ಜಯದೀಪ್ ಮಾತುಕತೆಯ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News