×
Ad

ಇನ್ನೆಷ್ಟು ಯೋಧರ ಜೀವಗಳು ಬಲಿಯಾಗಬೇಕು..?

Update: 2016-05-31 23:39 IST

ಮಾನ್ಯರೆ,
ಮೊನ್ನೆ ಉತ್ತರ ಕಾಶ್ಮೀರದಲ್ಲಿ ಭಾರತೀಯ ಸೇನಾ ಶಿಬಿರದ ಮೇಲೆ ಉಗ್ರರು ಗ್ರೆನೈಡ್ ದಾಳಿ ನಡೆಸಿದ ಪರಿಣಾಮ ನಮ್ಮ ಭದ್ರತಾ ಸಿಬ್ಬಂದಿ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಕೊಂದ ಭಾರತೀಯ ಯೋಧ ಉಗ್ರರ ಗುಂಡಿಗೆ ಬಲಿಯಾದ ಸುದ್ದಿ ತಿಳಿದು ಇನ್ನೆಷ್ಟು ನಮ್ಮ ಯೋಧರು ಬಲಿಯಾಗಬೇಕಾದೀತು ಎಂಬ ನೋವು ನನ್ನಂತೆ ಹಲವಾರು ಮಂದಿಗೆ ಕಾಡದೆ ಇರದು. ಅರುಣಾಚಲ ಪ್ರದೇಶದ ಬೊದರಿಯ ಎಂಬ ಹಳ್ಳಿಯವನಾದ ವೀರ ಯೋಧ ದಾದ ಎನ್ನುವ ಸ್ಪುರದ್ರೂಪಿ ಯುವಕ ಅದೆಷ್ಟೋ ಆಸೆ ಆಕಾಂಕ್ಷೆಗಳನ್ನು ಹೊತ್ತುಕೊಂಡು ಭಾರತೀಯ ಸೇನೆಗೆ ಸೇರುವ ಸಂದರ್ಭದಲ್ಲಿ ಇಷ್ಟು ಬೇಗ ಜೀವ ಕಳೆದುಕೊಳ್ಳಬಹುದೆಂದು ಊಹಿಸಿರಲಿಕ್ಕಿಲ್ಲ. ಯೋಧ ದಾದನಿಗೂ ಐಟಿ ಬಿಟಿ ಕಂಪೆನಿಗೆ ಸೇರಿ ಎಂಟು ಗಂಟೆ ಕೆಲಸ ಮಾಡಿ ತಮ್ಮ ಸಹೋದ್ಯೋಗಿಗಳ ಜೊತೆ ಉಲ್ಲಾಸ ಉತ್ಸಾಹದಿಂದ ಭವಿಷ್ಯ ರೂಪಿಸಬಹುದಿತ್ತು. ತಮ್ಮ ಕುಟುಂಬದವರನ್ನು ಪ್ರತಿದಿನ ತಮ್ಮ ಜೊತೆಯಲ್ಲೇ ಇಟ್ಟುಕೊಳ್ಳಬಹುದಿತ್ತು. ವಾರದ ಕೊನೆಯ ದಿನ ಎಲ್ಲರಂತೆ ಶಾಪಿಂಗ್‌ಗೋ, ಪಾರ್ಕಿಗೆ ಕರೆದುಕೊಂಡು ಹೋಗಿ ಹಾಯಾಗಿ ದಿನ ಕಳೆಯಬಹುದಿತ್ತು. ಹುಟ್ಟುಹಬ್ಬ, ಹಬ್ಬ ಹರಿದಿನಗಳನ್ನು ಕುಟುಂಬದ ಜೊತೆ ಆಚರಿಸಬಹುದಿತ್ತು. ಆದರೆ ಆತ ಇಟ್ಟುಕೊಂಡ ಭವಿಷ್ಯದ ಗುರಿ ಇಂದಿನ ಯುವ ಪೀಳಿಗೆಯದ್ದಾಗಿರಲಿಲ್ಲ. ತಮ್ಮ ಸಂಸಾರದ ಬಗ್ಗೆ ಕಿಂಚಿತ್ತೂ ಯೋಚಿಸದೆ ದೇಶ ಕಾಯುವ ಕೆಲಸಕ್ಕೆ ಸೇರಿಕೊಂಡು ಬದುಕನ್ನು ಇನ್ನೂ ಬೆಳಕಾಗುವಷ್ಟರಲ್ಲಿ ಉಗ್ರರ ಗುಂಡಿಗೆ ಬಲಿಯಾಗಬೇಕಾಯಿತು. ನಮ್ಮ ಯೋಧರು ಇದೇ ರೀತಿ ಜೀವವನ್ನು ಕಳೆದುಕೊಳ್ಳಬೇಕಾಗಿ ಬಂದರೆ ಸೈನ್ಯಕ್ಕೆ ಸೇರುವ ಯುವ ಮನಸ್ಸುಗಳ ಸಂಖ್ಯೆ ಇನ್ನಷ್ಟು ವಿರಳವಾಗಬಹುದು. ಈಗಿನ ಸೇನೆಯ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳು ಭಾರತೀಯ ಸೇನೆಗೆ ಸೇರಬೇಕು. ದೇಶ ಕಾಯುವ ಕೆಲಸ ತಮ್ಮ ಮಕ್ಕಳಿಂದ ಆಗಬೇಕು ಎಂದು ಯಾವೊಬ್ಬರೂ ಕೂಡ ಕನಸು ಕಾಣಲಿಕ್ಕಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹಾತೊರೆಯುತ್ತಿರುವ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲೋ ಭಾರತೀಯ ಸೇನೆಯಲ್ಲೋ ಸೇವೆ ಸಲ್ಲಿಸುವವರಿಗೆ ರಕ್ಷಣೆ ಸಿಕ್ಕಿದರೆ ಮಾತ್ರ ಮುಂದಿನ ಪೀಳಿಗೆ ಸೇನೆಗೆ ಸೇರಿ ನಮಗೆಲ್ಲ ರಕ್ಷಣೆ ಕೊಡಲು ಸಾಧ್ಯ. ಈ ದೇಶ ನೆಮ್ಮದಿಯ ನಾಳೆಯನ್ನು ಕಾಣಲು ಸಾಧ್ಯ.

Writer - -ರಿಯಾಝ್ ಜಿ., ಉಜಿರೆ

contributor

Editor - -ರಿಯಾಝ್ ಜಿ., ಉಜಿರೆ

contributor

Similar News