×
Ad

ಬೃಹತ್ ಅಣೆಕಟ್ಟುಗಳಿಂದ ಜೀವ ಪ್ರಭೇದಗಳ ನಾಶ: ಸಂಶೋಧನೆ

Update: 2016-05-31 23:40 IST

ಲಂಡನ್, ಮೇ 31: ಅರಣ್ಯನಾಶ ಮತ್ತು ಬೇಟೆಯಿಂದ ಪ್ರಾಣಿಗಳನ್ನು ರಕ್ಷಿಸುವ ಉದ್ದೇಶದಿಂದ ಅಭಯಾರಣ್ಯಗಳನ್ನು ನಿರ್ಮಿಸಲಾಗುತ್ತಿದ್ದರೂ, ಬೃಹತ್ ಅಣೆಕಟ್ಟುಗಳಿಂದಾಗಿ ನಿರ್ಮಾಣಗೊಂಡಿರುವ ಜಲಾಶಯದ ದ್ವೀಪಗಳಲ್ಲಿ ನಿರಂತರವಾಗಿ ಜೀವತಳಿಗಳ ನಾಶ ಸಂಭವಿಸುತ್ತಿದೆ ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ.

‘‘ನಾವು ಅಧ್ಯಯನ ಮಾಡಿದ ಜಲಾಶಯ ದ್ವೀಪಗಳಲ್ಲಿ ಕಾಲ ಸರಿದಂತೆ ಜೀವ ತಳಿಗಳ ಸಂಖ್ಯೆಯಲ್ಲಿ ಭಾರೀ ಕಡಿತ ಉಂಟಾಗಿರುವುದನ್ನು ಗಮನಿಸಿದ್ದೇವೆ. ಸಮೀಪದ ಪ್ರಧಾನ ನೆಲಕ್ಕೆ ಹೋಲಿಸಿದರೆ ದ್ವೀಪಗಳಲ್ಲಿನ ಜೀವ ತಳಿಗಳ ಸಂಖ್ಯೆಯಲ್ಲಿ 35 ಶೇಕಡ ಕಡಿತವಾಗಿದೆ. ದಕ್ಷಿಣ ಅಮೆರಿಕದ ಜಲಾಶಯ ದ್ವೀಪವೊಂದರಲ್ಲಿರುವ ಪಕ್ಷಿ ಧಾಮದಲ್ಲಿನ ತಳಿಗಳ ಸಂಖ್ಯೆಯಲ್ಲಿ 87 ಶೇಕಡದಷ್ಟು ಕಡಿತವಾಗಿದೆ’’ ಎಂದು ವರದಿಯ ಪ್ರಧಾನ ಲೇಖಕಿ ಸ್ಕಾಟ್‌ಲ್ಯಾಂಡ್‌ನ ಸ್ಟರ್ಲಿಂಗ್ ವಿಶ್ವವಿದ್ಯಾನಿಲಯದ ಇಸಾಬೆಲ್ ಜೋನ್ಸ್ ಹೇಳಿದರು.

‘‘ಅಣೆಕಟ್ಟು ಎಲ್ಲಿದೆ, ದ್ವೀಪದ ಗಾತ್ರವೆಷ್ಟು ಹಾಗೂ ಯಾವ ಜೀವ ಪ್ರಭೇದಗಳು ಅಲ್ಲಿವೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ, ಇಂಥ ದ್ವೀಪಗಳಲ್ಲಿ ನಿರಂತರವಾಗಿ ಜೀವ ಪ್ರಭೇದಗಳ ನಾಶವಾಗುತ್ತಿದೆ’’ ಎಂದರು.

‘ಬಯಾಲಜಿಕಲ್ ಕನ್ಸರ್ವೇಶನ್’ ಪತ್ರಿಕೆಯಲ್ಲಿ ಸಂಶೋಧನೆ ಪ್ರಕಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News