×
Ad

ಭಾರತದಲ್ಲಿ 1.83 ಕೋಟಿ ಜೀತದಾಳುಗಳು

Update: 2016-05-31 23:41 IST

ಮೆಲ್ಬರ್ನ್, ಮೇ 31: ವೇಶ್ಯಾವಾಟಿಕೆ ಮತ್ತು ಭಿಕ್ಷಾಟನೆ ಸೇರಿದಂತೆ ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ 1.83 ಕೋಟಿ ಜೀತದಾಳುಗಳು ಇದ್ದಾರೆ ಹಾಗೂ ಇದು ಜಗತ್ತಿನಲ್ಲೇ ಅಧಿಕವಾಗಿದೆ ಎಂದು ವರದಿಯೊಂದು ತಿಳಿಸಿದೆ. ಜಗತ್ತಿನಲ್ಲಿ ಇಂಥ ಜೀತದಾಳುಗಳ ಸಂಖ್ಯೆ ಸುಮಾರು 4.6 ಕೋಟಿ ಎಂದು ಅದು ಹೇಳಿದೆ.

ಜಗತ್ತಿನಲ್ಲಿ ಒಂದು ರೀತಿಯ ಆಧುನಿಕ ಗುಲಾಮಗಿರಿಗೆ ತುತ್ತಾದವರ ಸಂಖ್ಯೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 4.58 ಕೋಟಿ ಎಂದು ಆಸ್ಟ್ರೇಲಿಯದ ಮಾನವಹಕ್ಕುಗಳ ಗುಂಪು ‘ವಾಕ್ ಫ್ರೀ ಫೌಂಡೇಶನ್’ ಇಂದು ಬಿಡುಗಡೆ ಮಾಡಿದ ‘2016 ಗ್ಲೋಬಲ್ ಸ್ಲೇವರಿ ಇಂಡೆಕ್ಸ್’ (2016 ಜಾಗತಿಕ ಜೀತದಾಳು ಸೂಚ್ಯಂಕ) ತಿಳಿಸಿದೆ.

2014ರಲ್ಲಿ ಈ ಸಂಖ್ಯೆ 3.58 ಕೋಟಿ ಆಗಿತ್ತು ಎಂದು ಅದು ಹೇಳಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಜೀತದಾಳುಗಳು ಭಾರತದಲ್ಲಿದ್ದಾರೆ ಎಂದು ಅದು ಹೇಳಿದೆ. ಭಾರತದ 130 ಕೋಟಿ ಜನಸಂಖ್ಯೆಯ ಪೈಕಿ ಸುಮಾರು 1.83 ಕೋಟಿ ಜನರು ಜೀತದಾಳುಗಳು ಎಂದಿದೆ. ಉತ್ತರ ಕೊರಿಯದಲ್ಲಿ ಜೀತದಾಳು ದರ ಅತ್ಯಧಿಕವಾಗಿದೆ (ಜನಸಂಖ್ಯೆಯ 4.37 ಶೇಕಡ) ಹಾಗೂ ಅದನ್ನು ನಿಭಾಯಿಸುವ ಸರಕಾರದ ಪ್ರಕ್ರಿಯೆ ದುರ್ಬಲವಾಗಿದೆ.

2014ರ ವರದಿಯ ಪ್ರಕಾರ, ಭಾರತದಲ್ಲಿ 1.43 ಕೋಟಿ ಜೀತದಾಳುಗಳಿದ್ದರು.

ಸೂಚ್ಯಂಕದಲ್ಲಿರುವ ಎಲ್ಲ 167 ದೇಶಗಳಲ್ಲಿ ಜೀತದಾಳು ಗಳಿದ್ದಾರೆ. ಆದರೆ, ವರದಿಯ ಅಗ್ರ ಐದರ ಸ್ಥಾನಗಳನ್ನು ಏಶ್ಯದ ದೇಶಗಳೇ ಹಂಚಿಕೊಂಡಿವೆ.

ಭಾರತ ಪ್ರಥಮ ಸ್ಥಾನದಲ್ಲಿದ್ದರೆ, ಚೀನಾ (33.9 ಲಕ್ಷ), ಪಾಕಿಸ್ತಾನ (21.3 ಲಕ್ಷ), ಬಾಂಗ್ಲಾದೇಶ (15.3 ಲಕ್ಷ) ಮತ್ತು ಉಝ್ಬೆಕಿಸ್ತಾನ (12.3 ಲಕ್ಷ) ನಂತರದ ಸ್ಥಾನಗಳಲ್ಲಿವೆ.

ಈ ಐದು ದೇಶಗಳಲ್ಲಿರುವ ಜೀತದಾಳುಗಳ ಒಟ್ಟು ಸಂಖ್ಯೆ ಜಾಗತಿಕ ಸಂಖ್ಯೆಯ 58 ಶೇಕಡದಷ್ಟಾಗುತ್ತದೆ ಎಂದು ವರದಿ ಹೇಳುತ್ತದೆ.

 ಬೆದರಿಕೆ, ಹಿಂಸೆ, ಬಲವಂತ, ಅಧಿಕಾರ ದುರುಪಯೋಗ ಅಥವಾ ವಂಚನೆಯಿಂದಾಗಿ ಹೊರಬರಲಾಗದೆ ಜನರು ಶೋಷಣೆಗೆ ಒಳಪಡುವ ಸ್ಥಿತಿಯನ್ನು ಆಧುನಿಕ ಜೀತ ಎಂಬುದಾಗಿ ಪರಿಗಣಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News