×
Ad

ಜಗತ್ತಿನ ಅತ್ಯಂತ ಉದ್ದದ ರೈಲು ಸುರಂಗಕ್ಕೆ ಚಾಲನೆ

Update: 2016-06-01 20:11 IST

ಅರ್ಸ್ಟ್‌ಫೆಲ್ಡ್ (ಸ್ವಿಝರ್‌ಲ್ಯಾಂಡ್), ಜೂ. 1: ಏಳು ದಶಕಗಳ ಹಿಂದೆ ಆರಂಭಿಕ ವಿನ್ಯಾಸ ಕಂಡ ಜಗತ್ತಿನ ಅತ್ಯಂತ ಉದ್ದದ ರೈಲ್ವೆ ಸುರಂಗ ಇಂದು ಅಧಿಕೃತವಾಗಿ ಬಳಕೆಗೆ ತೆರೆದುಕೊಂಡಿದೆ.

 ಸ್ವಿಝರ್‌ಲ್ಯಾಂಡ್‌ನ 57 ಕಿಲೋಮೀಟರ್ ಉದ್ದದ ಗೊಟ್ಹಾರ್ಡ್ ಬೇಸ್ ಸುರಂಗ ಮಧ್ಯದ ನಗರ ಉರಿಯ ಅರ್ಸ್ಟ್‌ಫೆಲ್ಡ್‌ನಿಂದ ದಕ್ಷಿಣದ ನಗರ ಟಿಸಿನೊದ ಬೋಡಿಯೊಗೆ ಆಲ್ಪ್ಸ್ ಪರ್ವತದ ಅಡಿಯಲ್ಲಿ ಸಾಗುತ್ತದೆ.

ಗೊಟ್ಹಾರ್ಡ್ ಪಾಸ್‌ನಡಿಯಲ್ಲಿ ಸಾಗುವ ರೈಲು ಸುರಂಗದ ಮೇಲ್ನೋಟದ ವಿನ್ಯಾಸವನ್ನು ಮೊದಲಾಗಿ ಸ್ವಿಸ್ ಇಂಜಿನಿಯರ್ ಕಾರ್ಲ್ ಎಡ್ವರ್ಡ್ ಗ್ರೂನರ್ 1947ರಲ್ಲಿ ರಚಿಸಿದ್ದರು.

ಆದರೆ, ಅಧಿಕಾರಶಾಹಿಯ ವಿಳಂಬ, ವೆಚ್ಚದ ಕುರಿತ ಆತಂಕ ಮತ್ತು ಇತರ ಅಡೆತಡೆಗಳ ಹಿನ್ನೆಲೆಯಲ್ಲಿ ಸುರಂಗ ನಿರ್ಮಾಣ ಕಾರ್ಯದ ಆರಂಭ 1999ರವರೆಗೆ ನಡೆಯಲಿಲ್ಲ.

ಇದಾದ 17 ವರ್ಷಗಳ ಬಳಿಕ ಗೊಟ್ಹಾರ್ಡ್ ಬೇಸ್ ಟನೆಲ್ (ಸುರಂಗ) ಆರಂಭಿಕ ಯಾತ್ರೆಗೆ ಈಗ ಸಿದ್ಧಗೊಂಡಿದೆ. ಇದರ ನಿರ್ಮಾಣಕ್ಕೆ 12 ಬಿಲಿಯ ಸ್ವಿಸ್ ಫ್ರಾಂಕ್ (ಸುಮಾರು 80,660 ಕೋಟಿ ರೂಪಾಯಿ)ಗೂ ಅಧಿಕ ವೆಚ್ಚ ತಗಲಿದೆ.

ಸುರಂಗವು ಡಿಸೆಂಬರ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಆರಂಭಿಸಲಿದೆ. ಆಗ ಝೂರಿಕ್‌ನಿಂದ ಉತ್ತರ ಇಟಲಿಯ ಮಿಲಾನ್‌ಗೆ ರೈಲಿನಲ್ಲಿ ಹೋಗುವ ಸಮಯ ಎರಡು ಗಂಟೆ 40 ನಿಮಿಷಗಳಿಗೆ ಇಳಿಯಲಿದೆ. ಅಂದರೆ ಈಗಿನ ಅವಧಿಗಿಂತ ಒಂದು ಗಂಟೆ ಉಳಿತಾಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News