ಪೆಟ್ರೋಲ್ ಮೇಲಿನ ವ್ಯಾಟ್ ಕಡಿತಗೊಳಿಸಿದ ಗೋವಾ ಸರಕಾರ
ಪಣಜಿ,ಜೂ.1: ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿರುವ ಕೇಂದ್ರ ಸರಕಾರದ ಕ್ರಮದಿಂದಾಗಿ ಹೆಚ್ಚಿನ ಹೊರೆಯಿಂದ ತನ್ನ ಜನರನ್ನು ರಕ್ಷಿಸುವ ಹೆಜ್ಜೆಯಾಗಿ ಗೋವಾ ಸರಕಾರವು ಪೆಟ್ರೋಲ್ ಮೇಲಿನ ವೌಲ್ಯವರ್ಧಿತ ತೆರಿಗೆ(ವ್ಯಾಟ್)ಯನ್ನು ಶೇ.20ರಿಂದ ಶೇ.15ಕ್ಕೆ ಇಳಿಸಿದೆ. ಇದರಿಂದಾಗಿ ರಾಜ್ಯದಲ್ಲೀಗ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 59.10 ರೂ.ಆಗಿದೆ.
ಗೋವಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 60 ರೂ.ಗಿಂತ ಹೆಚ್ಚಾಗಲು ಅವಕಾಶ ನೀಡುವುದಿಲ್ಲ ಎಂದು ನಾವು ನಮ್ಮ ಮುಂಗಡಪತ್ರದಲ್ಲಿ ಭರವಸೆ ನೀಡಿದ್ದೆವು ಎಂದು ಮುಖ್ಯಮಂತ್ರಿ ಲಕ್ಮೀಕಾಂತ ಪಾರ್ಸೇಕರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಮಂಗಳವಾರ ರಾತ್ರಿ ಕೇಂದ್ರವು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀ.ಗೆ 2.58 ರೂ. ಮತ್ತು ಡೀಸೆಲ್ ಬೆಲೆಯನ್ನು 2.26 ರೂ ಹೆಚ್ಚಿಸಿದ ಬಳಿಕ ರಾಜ್ಯದಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀ.ಗೆ 62 ರೂ.ಗೆ ನಿಗದಿಗೊಳಿಸಲಾಗಿತ್ತು. ಇದೀಗ ವ್ಯಾಟ್ ಕಡಿತದಿಂದಾಗಿ ರಾಜ್ಯದಲ್ಲಿ ಪ್ರತಿ ಲೀ.ಗೆ 59.10 ರೂ.ಗೆ ಲಭ್ಯವಾಗುತ್ತಿದೆ.