×
Ad

ವಿವಿ ಪ್ರವೇಶಾತಿ: ಹೆಲ್ಪ್‌ಲೈನ್‌ಗೆ ಯುಜಿಸಿ ಸೂಚನೆ

Update: 2016-06-01 23:56 IST

ಹೊಸದಿಲ್ಲಿ, ಜೂ.1: ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿರುವಂತೆಯೇ, ಎಲ್ಲಾ ವಿವಿಗಳು, ವಿದ್ಯಾರ್ಥಿಗಳ ದಾಖಲಾತಿಗೆ ಸಂಬಂಧಿಸಿದ ಪ್ರಶ್ನೆಗಳು, ಸಮಸ್ಯೆಗಳಿಗೆ ಸ್ಪಂದಿಸಲು ದಿನದ 24 ತಾಸುಗಳ ಕಾಲವೂ ಕಾರ್ಯನಿರ್ವಹಿಸುವ ಹೆಲ್ಪ್‌ಲೈನ್ ಸ್ಥಾಪಿಸಬೇಕೆಂದು ಕೇಂದ್ರ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ಸೂಚನೆ ನೀಡಿದೆ.

 ವಿವಿಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯು, ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣೆಯ ಅತ್ಯಂತ ಮಹತ್ವದ ಅಂಶವಾಗಿದ್ದು, ಅದನ್ನು ಅತ್ಯಂತ ಕಾಳಜಿ ಹಾಗೂ ಸ್ಪಷ್ಟತೆಯೊಂದಿಗೆ ನಡೆಸದಿದ್ದಲ್ಲಿ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಗೊಂದಲ ಹಾಗೂ ಸಮಸ್ಯೆಗೆ ಕಾರಣವಾಗಬಹುದು’’ ಎಂದು ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಸಂಧು, ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ವಿವಿಗಳ ಪ್ರವೇಶಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಸ್ಪಷ್ಟತೆ ಹಾಗೂ ಪರಿಣಾಮಕಾರಿತ್ವದ ಅಂಶಗಳನ್ನು ಖಾತರಿಪಡಿಸುವಂತೆಯೂ ಪತ್ರದಲ್ಲಿ ಸೂಚನೆ ನೀಡಲಾಗಿದೆ.

ಪ್ರವೇಶಾತಿಗೆ ಸಂಬಂಧಿಸಿ ವಿದ್ಯಾರ್ಥಿಗಳ ಪ್ರಶ್ನೆಗಳು,ಸಂದೇಹಗಳು, ಗೊಂದಲಗಳು ಹಾಗೂ ಅಹವಾಲುಗಳಿಗೆ ಸ್ಪಂದಿಸುವಂತಹ 24 ತಾಸುಗಳ ಕಾಲವೂ ಕಾರ್ಯನಿರ್ವಹಿಸುವ ಸಹಾಯವಾಣಿ (ಹೆಲ್ಪ್‌ಲೈನ್)ಯನ್ನು ಕೂಡಲೇ ಸ್ಥಾಪಿಸಬೇಕೆಂದು ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಸಂಧು, ಪತ್ರದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News