×
Ad

ಗುಲ್ಬರ್ಗ್‌ ಸೊಸೈಟಿ ಹತ್ಯಾಕಾಂಡ ಪ್ರಕರಣದ ತೀರ್ಪು ಪ್ರಕಟ: 24 ಮಂದಿ ತಪ್ಪಿತಸ್ಥರು , 36 ಮಂದಿ ಖುಲಾಸೆ

Update: 2016-06-02 13:52 IST

‌ಅಹ್ಮದಾಬಾದ್, ಜೂ.2: ಗುಜರಾತ್‌ನ ಗೋಧ್ರಾದಲ್ಲಿ2002ರಲ್ಲಿ ನಡೆದ ಹಿಂಸಾಚಾರದ ಬಳಿಕ  ಅಹ್ಮದಾಬಾದ್ ನ ಚಮನಾಪುರದಲ್ಲಿರುವ ಗುಲ್ಬರ್ಗ್‌ ಸೊಸೈಟಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿ ತಪ್ಪಿತಸ್ಥರು  ಎಂದು ಗುರುವಾರ ತೀರ್ಪು ನೀಡಿರುವ ಅಹ್ಮದಾಬಾದ್ ನ ವಿಶೇಷ ನ್ಯಾಯಾಲಯವು ಬಿಜೆಪಿ ಕಾರ್ಪೊರೇಟರ್ ಬಿಪಿನ್ ಪಟೇಲ್ ಸೇರಿದಂತೆ   36 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ನಿರ್ದೇಶಕ ಆರ್‌.ಕೆ.ರಾಘವನ್‌ ನೇತೃತ್ವದ ವಿಶೇಷ ತನಿಖಾ ತಂಡ(ಎಸ್‌ಐಟಿ ) 66 ಆರೋಪಿಗಳನ್ನು ಹೆಸರಿಸಿತ್ತು. ಈ ಪೈಕಿ ಐವರು ಆರೋಪಿಗಳು ಸಾವನ್ನಪ್ಪಿದ್ದು, ಒಬ್ಬ ಆರೋಪಿ ತಲೆತಪ್ಪಿಸಿಕೊಂಡಿದ್ದನು. 59 ಆರೋಪಿಗಳು ತೀರ್ಪು ಹೊರಬೀಳುವಾಗ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು
ತಪ್ಪಿಸ್ಥರೆಂದು ನ್ಯಾಯಾಲಯವು ಪರಿಗಣಿಸಿದ 24 ಮಂದಿ ಆರೋಪಿಗಳ ಪೈಕಿ 11 ಆರೋಪಿಗಳ  ವಿರುದ್ಧ ಕೊಲೆ ಆರೋಪ ಸಾಬೀತಾಗಿದೆ.ಇತರ 13  ಮಂದಿ  ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜೂನ್‌ 6 ಕ್ಕೆ ಮುಂದೂಡಿದೆ.
2002, ಫೆಬ್ರವರಿ 22ರಂದು ನಡೆದ  ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದಲ್ಲಿ  ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ   69 ಮಂದಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. 

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ತೀರ್ಪು ಗುರುವಾರ ಪ್ರಕಟವಾಗಲಿರುವ ಹಿನ್ನಲೆಯಲ್ಲಿ ಅಹ್ಮದಾಬಾದ್ ವಿಶೇಷ ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

 ಈ ಪ್ರಕರಣದ ವಿಚಾರಣೆಯನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ನಡೆಸಿತ್ತು. ನ್ಯಾಯಮೂರ್ತಿ ಪಿಬಿ ದೇಸಾಯಿ ಅವರು ಸತತ 8 ತಿಂಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ್ದರು. 338 ಮಂದಿ ಸಾಕ್ಷಿಗಳ ಹೇಳಿಕೆ ಪಡೆದಿದ್ದ ನ್ಯಾಯಾಧೀಶರು ಅಂತಿಮವಾಗಿ   ತಮ್ಮ  ತೀರ್ಪು ಪ್ರಕಟಿಸಿದ್ದಾರೆ.
ಕಳೆದ ಫೆಬ್ರವರಿ 26ರಂದು ನಡೆದಿದ್ದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್ ಅಹ್ಮದಾಬಾದ್ ನ್ಯಾಯಾಲಯಕ್ಕೆ ಪ್ರಕರಣದ ಅಂತಿಮ ತೀರ್ಪು ಪ್ರಕಟಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News