ಆಫ್ರಿಕ: ನೀರು ತರಲು ಹೊರ ಹೋಗುವ 1.7 ಕೋಟಿ ಮಹಿಳೆಯರು ಅತ್ಯಾಚಾರಕ್ಕೊಳಗಾಗುವ ಅಪಾಯದಲ್ಲಿ
ಲಂಡನ್, ಜೂ. 2: ಆಫ್ರಿಕದಲ್ಲಿ ಪ್ರತಿ ನಿತ್ಯ ಕನಿಷ್ಠ 1.7 ಕೋಟಿ ಮಹಿಳೆಯರು ಮತ್ತು ಬಾಲಕಿಯರು ಹೊರಗೆ ಹೋಗಿ ನೀರು ತರುತ್ತಾರೆ. ಇದು ಅವರು ಲೈಂಗಿಕ ದೌರ್ಜನ್ಯ ಹಾಗೂ ರೋಗಗಳಿಗೆ ತುತ್ತಾಗುವ ಅಪಾಯ ಮತ್ತು ಅರ್ಧದಲ್ಲೇ ಶಾಲೆ ಬೀಡಬೇಕಾದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಬುಧವಾರ ಪ್ರಕಟಗೊಂಡ ವರದಿಯೊಂದು ಹೇಳಿದೆ.
ಆಫ್ರಿಕದಲ್ಲಿ ನೀರು ತರಲು ಎಷ್ಟು ಮಹಿಳೆಯರು ಮತ್ತು ಬಾಲಕಿಯರು ಹೊರಗೆ ಹೋಗುತ್ತಾರೆ ಎಂಬ ಕುರಿತು ನಡೆದ ಮೊದಲ ಅಧ್ಯಯನವಾಗಿದೆ ಎಂದು ಸಂಶೋಧಕರು ಹೇಳುತ್ತಾರೆ.
ವಿಶ್ವಬ್ಯಾಂಕ್, ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯೂನಿಸೆಫ್ ಮತ್ತು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ ಅಂಕಿಸಂಖ್ಯೆಗಳನ್ನು ಬಳಸಿರುವ ಸಂಶೋಧಕರು, ಉಪ ಸಹಾರ ಆಫ್ರಿಕದಲ್ಲಿ ಸುಮಾರು 30 ಲಕ್ಷ ಮಕ್ಕಳು ಮತ್ತು 1.4 ಕೋಟಿ ಮಹಿಳೆಯರು ಹೊರಗಿನಿಂದ ನೀರು ಸಂಗ್ರಹಿಸುತ್ತಾರೆ ಎಂದು ಅಂದಾಜಿಸಿದ್ದಾರೆ.
‘‘ಹೊರಗಿನಿಂದ ನೀರು ತರುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ವಯಸ್ಕ ಮಹಿಳೆಯರ ಸಂಖ್ಯೆ ಆಘಾತ ಹುಟ್ಟಿಸುತ್ತದೆ’’ ಎಂದು ಅಧ್ಯಯನದ ಪ್ರಧಾನ ಲೇಖಕ ಜೇ ಗ್ರಹಾಂ ‘ತಾಮ್ಸನ್ ರಾಯ್ಟರ್ಸ್ ಫೌಂಡೇಶನ್’ಗೆ ಹೇಳಿದರು.
‘‘ಈ ಸಂಖ್ಯೆ ತುಂಬಾ ದೊಡ್ಡದಿದೆ ಎಂದು ನನಗೆ ಗೊತ್ತಿತ್ತು. ಆದರೆ, ಅದು ಇಷ್ಟು ಅಗಾಧವಾಗಿದೆ ಎಂದು ನನಗೆ ಗೊತ್ತಿರಲಿಲ್ಲ’’ ಎಂದು ಜಾರ್ಜ್ ವಾಶಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿ ಮಿಲ್ಕನ್ ಸಾರ್ವಜನಿಕ ಆರೋಗ್ಯ ಶಾಲಾ ಸಂಸ್ಥೆಯಲ್ಲಿ ಪ್ರೊಫೆಸರ್ ಆಗಿರುವ ಅವರು ಹೇಳುತ್ತಾರೆ.
ಈ ಪ್ರತಿನಿತ್ಯದ ಕಾಯಕವು ಮಾಂಸಖಂಡಗಳ ಕರುಗುವಿಕೆ ಹಾಗೂ ಮೃದು ಅಂಗಾಂಶ ಹಾನಿಗೆ ಕಾರಣವಾಗಬಹುದು ಹಾಗೂ ಬೇಗನೆ ಸಂಧಿವಾತ ಬರಬಹುದು.
ಹೆಚ್ಚಿನ ಸಂದರ್ಭಗಳಲ್ಲಿ ನೀರನ್ನು ಹುಡುಕಿಕೊಂಡು ತುಂಬಾ ದೂರ ಹೋಗಬೇಕಾಗಿರುವುದರಿಂದ, ಮಹಿಳೆಯರು ಮತ್ತು ಬಾಲಕಿಯರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ಅಪಾಯವೂ ಹೆಚ್ಚಾಗಿದೆ ಎಂದು ಜೇ ಗ್ರಹಾಂ ಅಭಿಪ್ರಾಯಪಡುತ್ತಾರೆ.