ಪ್ರೊಫೆಸರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Update: 2016-06-02 15:49 GMT

ಲಾಸ್ ಏಂಜಲಿಸ್, ಜೂ. 2: ಲಾಸ್ ಏಂಜಲಿಸ್‌ನಲ್ಲಿರುವ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಗುಂಡು ಹಾರಾಟದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯೋರ್ವ ಪ್ರೊಫೆಸರ್ ಒಬ್ಬರನ್ನು ಹತ್ಯೆಗೈದಿದ್ದಾನೆ ಹಾಗೂ ಬಳಿಕ ತನಗೆ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲಾಸ್ ಏಂಜಲಿಸ್ ಪೊಲೀಸರು ಬಂದೂಕುಧಾರಿಯನ್ನು ಮೈನಾಕ್ ಸರ್ಕಾರ್ ಎಂಬುದಾಗಿ ಗುರುತಿಸಿದ್ದಾರೆ. ಆತ ವಿಶ್ವವಿದ್ಯಾನಿಲಯದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ.
ಹತ್ಯೆಗೀಡಾದ ಪ್ರೊಫೆಸರ್‌ರನ್ನು 39 ವರ್ಷದ ಎಂಜಿನಿಯರಿಂಗ್ ಪ್ರೊಫೆಸರ್ ವಿಲಿಯಂ ಕ್ಲಗ್ ಎಂದು ಗುರುತಿಸಲಾಗಿದೆ.
ಹತ್ಯೆ ಮತ್ತು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಕ್ಲಗ್ ಮೆಕಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್‌ನ ಪ್ರೊಫೆಸರ್ ಆಗಿದ್ದರು ಎಂದು ವಿಶ್ವವಿದ್ಯಾನಿಲಯದ ವೆಬ್‌ಸೈಟ್ ತಿಳಿಸಿದೆ. ಅವರು ಕಂಪ್ಯೂಟರ್ ಆಧರಿತ ವಾಸ್ತವಿಕ ಹೃದಯವೊಂದನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದರು ಎಂದು ಹೇಳಲಾಗಿದೆ.
ಆರಂಭದಲ್ಲಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಾಮೂಹಿಕ ಹತ್ಯಾಕಾಂಡ ನಡೆಸಲಾಗುತ್ತಿದೆ ಎಂದೇ ವ್ಯಾಪಕವಾಗಿ ಭಾವಿಸಲಾಗಿತ್ತು. ಆವರಣದಲ್ಲಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಿಬ್ಬಂದಿ ಸಿಕ್ಕ ಸಿಕ್ಕಲ್ಲಿ ಅಡಗಿಕೊಂಡರು.
ಪೊಲೀಸರಿಗೆ ಮಾಹಿತಿ ತಲುಪಿದೊಡನೆ, ಬೃಹತ್ ಪ್ರಮಾಣದ ಕಾರ್ಯಾಚರಣೆಗಾಗಿ ಗುಂಡು ನಿರೋಧಕ ಕವಚಗಳನ್ನು ಧರಿಸಿದ 200ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಧಾವಿಸಿದರು. ಪೊಲೀಸ್ ಕಾರ್ಯಾಚರಣೆಯ ವೇಳೆ ಪೊಲೀಸ್ ನಿಗಾ ಹೆಲಿಕಾಪ್ಟರ್‌ಗಳು ವಿಶ್ವವಿದ್ಯಾನಿಲಯದ ಮೇಲೆ ಹಾರಾಟ ನಡೆಸಿದವು.
ಈ ಘಟನೆಯಿಂದಾಗಿ ಬುಧವಾರ ಸುಮಾರು ಎರಡು ಗಂಟೆಗಳ ಕಾಲ ವಿಶ್ವವಿದ್ಯಾನಿಲಯದ ಬೃಹತ್ ಆವರಣ ಸ್ತಬ್ಧವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News