ಬ್ರಿಟನ್: ಟಾಟಾ ಉಕ್ಕು ಸ್ಥಾವರದಲ್ಲಿ ಬೆಂಕಿ
Update: 2016-06-02 21:30 IST
ಲಂಡನ್, ಜೂ. 2: ಬ್ರಿಟನ್‌ನಲ್ಲಿರುವ ಟಾಟಾ ಉಕ್ಕು ಸ್ಥಾವರವೊಂದರಲ್ಲಿ ಗುರುವಾರ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಾವರದಲ್ಲಿದ್ದ ಸಾವಿರಾರು ಲೀಟರ್ ತೈಲ ಬೆಂಕಿಯ ಸಂಪರ್ಕಕ್ಕೆ ಬಂದಿರುವುದೇ ಬೆಂಕಿ ಭುಗಿಲೇಳಲು ಕಾರಣ ಎನ್ನಲಾಗಿದೆ.
ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ಇಂಗ್ಲೆಂಡ್‌ನ ದಕ್ಷಿಣ ಯಾರ್ಕ್‌ಶಯರ್ ವಲಯದ ರೋದರ್‌ಹ್ಯಾಮ್‌ನಲ್ಲಿರುವ ಆ್ಯಲ್ಡ್‌ವಾರ್ಕ್ ಲೇನ್ ಸ್ಥಾವರದಲ್ಲಿ ಕಾಣಿಸಿಕೊಂಡ ಬೃಹತ್ ಬೆಂಕಿಯನ್ನು ಬೆಳಗ್ಗಿನ ವೇಳೆಗೆ ನಿಯಂತ್ರಣಕ್ಕೆ ತರಲಾಗಿದೆ.
ಉಕ್ಕು ನಿರ್ಮಾಣ ಪ್ರಕ್ರಿಯೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಟಾಟಾ ಸ್ಟೀಲ್ ವಕ್ತಾರರೋರ್ವರು ತಿಳಿಸಿದರು.
‘‘ಬೆಂಕಿಯನ್ನು ಈಗ ನಂದಿಸಲಾಗಿದೆ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಈಗ ಸ್ಥಳದಿಂದ ಹೊರಹೋಗುತ್ತಿದ್ದಾರೆ. ಈಗ ನಾವು ಹಾನಿ ಮತ್ತು ದುರಸ್ತಿಯ ಅಂದಾಜು ನಡೆಸುತ್ತಿದ್ದೇವೆ’’ ಎಂದರು.