ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಪ್ರಪ್ರಥಮ ಭಾರತೀಯ ಮಹಿಳಾ ಸದಸ್ಯೆ
ಹೊಸದಿಲ್ಲಿ, ಜೂ.3: ರಿಲಯನ್ಸ್ ಪ್ರತಿಷ್ಠಾನದ ಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ(ಐಒಸಿ) ಬಾಕಿ ಇರುವ ಹೊಸ ಸದಸ್ವತ್ವ ಚುನಾವಣೆಗೆ ಅಭ್ಯರ್ಥಿಯಾಗಿ ಶುಕ್ರವಾರ ನಾಮನಿರ್ದೇಶನಗೊಂಡಿದ್ದಾರೆ.ನೀತಾ ಅಂಬಾನಿ ಐಒಸಿಗೆ ನಾಮನಿರ್ದೇಶನಗೊಳ್ಳುತ್ತಿರುವ ಭಾರತದ ಮೊದಲ ಮಹಿಳೆ.
ಶುಕ್ರವಾರ ಸ್ವಿಟ್ಝರ್ಲೆಂಡ್‌ನ ಲೌಸಾನ್‌ನಲ್ಲಿರುವ ಐಒಸಿ ಮುಖ್ಯ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೀತಾ ಅಂಬಾನಿ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ.
ರಿಯೋ ಡಿಜನೈರೊದಲ್ಲಿ ಆಗಸ್ಟ್ 2 ಹಾಗೂ 4ರ ನಡುವೆ ನಡೆಯಲಿರುವ 129ನೆ ಐಒಸಿ ಅಧಿವೇಶನದಲ್ಲಿ ಚುನಾವಣೆ ನಡೆಯಲಿದೆ. ಒಂದು ವೇಳೆ ನೀತಾ ಐಒಸಿ ಸದಸ್ಯರಾಗಿ ಆಯ್ಕೆಯಾದರೆ 70ರ ವಯಸ್ಸಿನ ತನಕ ಆ ಹುದ್ದೆಯಲ್ಲಿರಬಹುದು.
ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರಗಳಲ್ಲಿ(ಫುಟ್ಬಾಲ್ ಹಾಗೂ ಬಾಸ್ಕಟ್‌ಬಾಲ್) ನೀಡಿರುವ ಮಹತ್ವದ ಕೊಡುಗೆಯನ್ನು ಪರಿಗಣಿಸಿ ನೀತಾ ಅಂಬಾನಿ ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
‘‘ಐಒಸಿಗೆ ನಾಮನಿರ್ದೇಶನಗೊಂಡಿರುವುದು ನಿಜವಾಗಿಯೂ ಒಂದು ಮಹಾ ಗೌರವ. ಐಒಸಿ ಸದಸ್ಯತ್ವ ಚುನಾವಣೆಗೆ ನನ್ನ ಹೆಸರು ಶಿಫಾರಸುಗೊಂಡಿದ್ದಕ್ಕೆ ಸಂತೋಷವಾಗುತ್ತಿದೆ. ಕ್ರೀಡಾ ಶಕ್ತಿಯು ಸಮುದಾಯವನ್ನು ಸದೃಢಗೊಳಿಸುತ್ತದೆ. ಸಂಸ್ಕೃತಿ ಹಾಗೂ ಪೀಳಿಗೆಯ ನಡುವೆ ಸೇತುವೆಯಾಗಲಿದೆ ಎನ್ನುವುದು ನನ್ನ ನಂಬಿಕೆ. ಐಒಸಿ ಗುರಿಯನ್ನು ತಲುಪಲು ಕಾಣಿಕೆ ನೀಡುವ ಅವಕಾಶಕ್ಕಾಗಿ ಎದುರು ನೋಡುತ್ತಿರುವೆ’’ಎಂದು ನೀತಾ ಅಂಬಾನಿ ಪ್ರತಿಕ್ರಿಯಿಸಿದ್ದಾರೆ.
ಅಂಬಾನಿಗೆ ಅಭಿನಂದನೆಗಳ ಸುರಿಮಳೆ...
ನೀತಾ ಅಂಬಾನಿ ಐಒಸಿ ಸದಸ್ಯತ್ವಕ್ಕೆ ನಾಮನಿರ್ದೇಶನಗೊಂಡಿರುವುದಕ್ಕೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಬಾಲಿವುಡ್ ನಟ ಶಾರೂಕ್ ಖಾನ್ ಸಹಿತ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
‘‘ಐಒಸಿಗೆ ನಾಮನಿರ್ದೇಶನಗೊಂಡಿರುವ ನೀತಾ ಅಂಬಾನಿ ಅವರಿಗೆ ಅಭಿನಂದನೆ. ಕ್ರೀಡಾ ಬೆಳವಣಿಗೆಗೆ ಬಗ್ಗೆ ನಿಮಗಿರುವ ಅಭಿಮಾನ ಶ್ಲಾಘನೀಯ. ಭಾರತ ಹಾಗೂ ಮಹಿಳೆಯ ಶಕ್ತಿಗೆ ಸ್ಮರಣೀಯ ಕ್ಷಣ ಇದಾಗಿದೆ’’ ಎಂದು ಸಚಿನ್ ತೆಂಡುಲ್ಕರ್ ಟ್ವಿಟ್ ಮಾಡಿದ್ದಾರೆ.
ನೀತಾ ಅಂಬಾನಿಗೆ ಅಭಿನಂದನೆ ಸಲ್ಲಿಸಿರುವ ಬಾಲಿವುಡ್ ತಾರೆ ಶಾರೂಕ್ ಖಾನ್, ಇದೀಗ ಕ್ರೀಡೆ ತಳಮಟ್ಟದಿಂದ ಅಭಿವೃದ್ದಿಯಾಗಲಿದೆ ಎಂದು ಹೇಳಿದರು.
‘‘ಐಒಸಿ ಸದಸ್ಯತ್ವಕ್ಕೆ ಉತ್ತಮ ವ್ಯಕ್ತಿ ಭಾರತವನ್ನು ಪ್ರತಿನಿಧಿಸಲು ನಾಮನಿರ್ದೇಶನವಾಗಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ’’ ಎಂದು ಟೆನಿಸ್ ಪಟು ಲಿಯಾಂಡರ್ ಪೇಸ್ ಟ್ವೀಟ್ ಮಾಡಿದರು.
‘‘ದೇಶದ ಎಲ್ಲ ಮೂಲೆಗೂ ಕ್ರೀಡೆಯನ್ನು ಕೊಂಡೊಯ್ಯಲು ಪ್ರಯತ್ನಿಸುತ್ತಿರುವ ನೀತಾ ಅಂಬಾನಿ ಐಒಸಿ ಸದಸ್ವತ್ವಕ್ಕೆ ನಾಮನಿರ್ದೇಶನಗೊಂಡಿರುವುದು ಸಂತೋಷದ ವಿಷಯ’’ ಎಂದು ಟೆನಿಸ್ ತಾರೆ ಸಾನಿಯಾ ಮಿರ್ಝಾ ಪ್ರತಿಕ್ರಿಯಿಸಿದರು.