ಆಸ್ಟ್ರೇಲಿಯದ ವಿರುದ್ಧ ಹಗಲು-ರಾತ್ರಿ ಟೆಸ್ಟ್ ಆಡಲು ಆಫ್ರಿಕ ಸಮ್ಮತಿ
ಮೆಲ್ಬೋರ್ನ್, ಜೂ.3: ದಕ್ಷಿಣ ಆಫ್ರಿಕ ತಂಡ ಅಡಿಲೇಡ್‌ನಲ್ಲಿ ಆತಿಥೇಯ ಆಸ್ಟ್ರೇಲಿಯದ ವಿರುದ್ಧ ನವೆಂಬರ್‌ನಲ್ಲಿ ನಡೆಯಲಿರುವ ಪ್ರಸ್ತಾವಿತ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಪಿಂಕ್ ಚೆಂಡಿನಲ್ಲಿ ಆಡಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.
ಪಿಂಕ್ ಬಾಲ್‌ಕ್ರಿಕೆಟ್‌ನ ಕುರಿತು ದಕ್ಷಿಣ ಆಫ್ರಿಕ ಆಟಗಾರರು ತಮ್ಮ ನಿಲುವನ್ನು ಬದಲಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯ ಪ್ರವಾಸದಲ್ಲಿ ಎರಡು ಡೇ-ನೈಟ್ ಟೆಸ್ಟ್ ಆಡಲು ಒಪ್ಪಿಕೊಂಡಿದ್ದಾರೆ.ಮಂದ ಬೆಳಕಿನಲ್ಲಿ ಪಿಂಕ್ ಚೆಂಡು ಕಣ್ಣಿಗೆ ಸರಿಯಾಗಿ ಗೋಚರಿಸುವುದಿಲ್ಲ ಎಂಬ ಕಾರಣಕ್ಕೆ ಆಫ್ರಿಕ ಆಟಗಾರರು ಹಗಲು-ರಾತ್ರಿ ಪಂದ್ಯವನ್ನು ವಿರೋಧಿಸುತ್ತಿದ್ದರು ಎಂದು ‘ದಿ ಹೆರಾಲ್ಡ್ ಸನ್’ ಶುಕ್ರವಾರ ವರದಿ ಮಾಡಿದೆ.
ಅಡಿಲೇಡ್ ಟೆಸ್ಟ್ ಪಂದ್ಯವನ್ನು ಹಗಲು-ರಾತ್ರಿ ಪಂದ್ಯವಾಗಿ ಆಡುವ ಬಗ್ಗೆ ನಾವು ಈಗಲೂ ಆಶಾವಾದಿಯಾಗಿದ್ದೇವೆ. ಕಳೆದ ವರ್ಷ ಅಡಿಲೇಡ್ ಟೆಸ್ಟ್ ಯಶಸ್ಸು ಸಾಧಿಸಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಮತ್ತಷ್ಟು ವಿಸ್ತರಿಸುವ ವಿಶ್ವಾಸದಲ್ಲಿದ್ದೇವೆ. ಕ್ರಿಕೆಟ್ ದಕ್ಷಿಣ ಆಫ್ರಿಕದೊಂದಿಗೆ ಮಾತುಕತೆ ಮುಂದುವರಿದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಅಡಿಲೇಡ್‌ನಲ್ಲಿ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ನಡುವೆ ನಡೆದಿದ್ದ ಹಗಲು-ರಾತ್ರಿ ಪಂದ್ಯದಲ್ಲಿ ದಾಖಲೆ ಸಂಖ್ಯೆಯ ಪ್ರೇಕ್ಷಕರು ವೀಕ್ಷಿಸಿದ್ದರು. ಆ ಪಂದ್ಯ ದೊಡ್ಡ ಹಿಟ್ ಆಗಿತ್ತು. ಕ್ರಿಕೆಟ್ ಆಸ್ಟ್ರೇಲಿಯ 2016-17ರ ಋತುವಿನಲ್ಲಿ ಎರಡು ಡೇ/ನೈಟ್ ಟೆಸ್ಟ್ ಪಂದ್ಯ ಆಯೋಜಿಸಲು ಉತ್ಸುಕವಾಗಿದೆ.