×
Ad

ಸೆರೆನಾ ವಿಲಿಯಮ್ಸ್ ಫೈನಲ್‌ಗೆ: ಮುಗುರುಝ ಎದುರಾಳಿ

Update: 2016-06-03 23:04 IST

ದಾಖಲೆ 22ನೆ ಗ್ರಾನ್‌ಸ್ಲಾಮ್‌ನತ್ತ ಅಮೆರಿಕ ಆಟಗಾರ್ತಿ

 ಪ್ಯಾರಿಸ್, ಜೂ.3: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾಗಿರುವ ವಿಶ್ವದ ನಂ.1 ಆಟಗಾರ್ತಿ ಸೆರೆನಾ ವಿಲಿಯಮ್ಸ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಇತಿಹಾಸ ನಿರ್ಮಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಶುಕ್ರವಾರ ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಸೆಮಿಫೈನಲ್ ಪಂದ್ಯದಲ್ಲಿ 34ರ ಹರೆಯದ ಅಮೆರಿಕದ ಆಟಗಾರ್ತಿ ಸೆರೆನಾ ಹಾಲೆಂಡ್‌ನ ಕಿಕಿ ಬೆರ್ಟನ್ಸ್‌ರನ್ನು 7-6(9/7), 6-4 ಸೆಟ್‌ಗಳ ಅಂತರದಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದರು.

ಸತತ ಎರಡನೆ ದಿನ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸ್ಪರ್ಧೆಗೆ ಇಳಿದ ಸೆರೆನಾ ಆರಂಭದಲ್ಲಿ ಆತಂಕವನ್ನು ಎದುರಿಸಿದರೂ ಅಂತಿಮವಾಗಿ ನಿರೀಕ್ಷಿತ ಜಯ ಸಾಧಿಸಿದರು.

22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ 1999ರಲ್ಲಿ ಪ್ಯಾರಿಸ್‌ನಲ್ಲಿ ಸ್ಟೆಫಿಗ್ರಾಫ್ ನಿರ್ಮಿಸಿದ್ದ ದಾಖಲೆಯನ್ನು ಸರಿಗಟ್ಟಿ ಹೊಸ ಇತಿಹಾಸ ಬರೆಯುವತ್ತ ಚಿತ್ತವಿರಿಸಿರುವ ಸೆರೆನಾ ಶನಿವಾರ ನಡೆಯಲಿರುವ ಫೈನಲ್‌ನಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಝ ಅವರನ್ನು ಎದುರಿಸಲಿದ್ದಾರೆ.

‘‘ಮೊದಲ ಸೆಟ್ ಸುಲಭವಾಗಿರಲಿಲ್ಲ. ಬೆರ್ಟನ್ಸ್ ಉತ್ತಮವಾಗಿ ಆಡಿದರು. ನಾನು ಫೈನಲ್ ಪಂದ್ಯದಲ್ಲಿ ಶಾಂತಚಿತ್ತದಿಂದ ಆಡಲು ನಿರ್ಧರಿಸಿದ್ದೇನೆ. ನನ್ನ ಬೆಂಬಲಕ್ಕೆ ಅಭಿಮಾನಿಗಳಿರುವ ವಿಶ್ವಾಸವಿದೆ’’ ಎಂದು ಸೆರೆನಾ ವಿಲಿಯಮ್ಸ್ ತಿಳಿಸಿದ್ದಾರೆ.

ಮುಗುರುಝ ಫೈನಲ್‌ಗೆ: ಉತ್ತಮ ಫಾರ್ಮ್‌ನಲ್ಲಿರುವ ನಾಲ್ಕನೆ ಶ್ರೇಯಾಂಕಿತೆ ಮುಗುರುಝ ಮತ್ತೊಂದು ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯದ ಸಮಂತಾ ಸ್ಟೋಸರ್‌ರನ್ನು 6-2, 6-4 ಸೆಟ್‌ಗಳ ಅಂತರದಿಂದ ಮಣಿಸಿ ಫೈನಲ್‌ಗೆ ತಲುಪಿದರು.

22ರ ಹರೆಯದ ಮುಗುರುಝ 2000ರ ಬಳಿಕ ಪ್ಯಾರಿಸ್‌ನಲ್ಲಿ ಫೈನಲ್‌ಗೆ ತಲುಪಿದ ಸ್ಪೇನ್‌ನ ಮೊದಲ ಆಟಗಾರ್ತಿ ಎನಿಸಿಕೊಂಡರು. ಮುಗುರುಝ ಕಳೆದ ವರ್ಷ ವಿಂಬಲ್ಡನ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News