×
Ad

ಕೊಪಾ ಅಮೆರಿಕ ಟೂರ್ನಿ: ಅಮೆರಿಕ ತಂಡಕ್ಕೆ ಕೊಲಂಬಿಯ ಆಘಾತ

Update: 2016-06-04 23:50 IST

ಸ್ಯಾಂಟಕ್ಲಾರ(ಅಮೆರಿಕ), ಜೂ.4: ಇಲ್ಲಿ ಶುಕ್ರವಾರ ಆರಂಭವಾದ 100ನೆ ಆವೃತ್ತಿಯ ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಶುಭಾರಂಭದ ನಿರೀಕ್ಷೆಯಲ್ಲಿದ್ದ ಆತಿಥೇಯ ಅಮೆರಿಕ ತಂಡಕ್ಕೆ ಕೊಲಂಬಿಯಾ ತಂಡ ಶಾಕ್ ನೀಡಿದೆ.

ತಲಾ ಒಂದು ಗೋಲು ಬಾರಿಸಿದ ಕ್ರಿಸ್ಟಿಯನ್ ಝಪಾಟಾ(8ನೆ ನಿಮಿಷ) ಹಾಗೂ ಜೇಮ್ಸ್ ರೊಡ್ರಿಗಝ್(42ನೆ ನಿಮಿಷ) ದಕ್ಷಿಣ ಅಮೆರಿಕ ತಂಡಕ್ಕೆ 2-0 ಗೋಲುಗಳ ಅಂತರದಿಂದ ಗೆಲುವು ತಂದುಕೊಟ್ಟರು.

 ಉತ್ತರ ಕ್ಯಾಲಿಫೋರ್ನಿಯದ ಲೇವಿ ಸ್ಟೇಡಿಯಂನಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊ ಉಪಸ್ಥಿತಿಯಲ್ಲಿ ಸುಮಾರು 67,439ರಷ್ಟಿದ್ದ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಎ ಗುಂಪಿನ ಮೊದಲ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಗೋಲು ಬಾರಿಸಿದ ಎಸಿ ಮಿಲನ್‌ನ ಝಪಾಟ ಹಾಗೂ ರಿಯಲ್ ಮ್ಯಾಡ್ರಿಡ್ ಕ್ಲಬ್‌ನ ಸ್ಟಾರ್ ಆಟಗಾರ ರೊಡ್ರಿಗಝ್ ವಿಶ್ವದ ನಂ.3ನೆ ತಂಡ ಕೊಲಂಬಿಯಕ್ಕೆ ಗೆಲುವಿನ ಆರಂಭ ನೀಡಿದರು.

42ನೆ ಪಂದ್ಯ ಆಡಿದ ಝಾಪಾಟ ಚೊಚ್ಚಲ ಗೋಲು ಬಾರಿಸಿದರು. ರೊಡ್ರಿಗಝ್ ಪೆನಾಲ್ಟಿ ಕಿಕ್ ಮೂಲಕ ತನ್ನ 43ನೆ ಪಂದ್ಯದಲ್ಲಿ 15ನೆ ಗೋಲು ಬಾರಿಸಿದರು.

1994ರ ವಿಶ್ವಕಪ್‌ನ ಬಳಿಕ ಮೊದಲ ಬಾರಿ ತವರು ನೆಲದಲ್ಲಿ ಪ್ರಮುಖ ಟೂರ್ನಿಯಲ್ಲಿ ಆಡಿದ ಅಮೆರಿಕ ಮೊದಲಾರ್ಧದಲ್ಲಿ ಎರಡು ಗೋಲು ಬಿಟ್ಟುಕೊಟ್ಟ ಬಳಿಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ವಿಫಲವಾಯಿತು.

ಅಮೆರಿಕ ಮಂಗಳವಾರ ನಡೆಯಲಿರುವ ಎ ಗುಂಪಿನ ಎರಡನೆ ಪಂದ್ಯದಲ್ಲಿ ಕಳೆದ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದ ಕೋಸ್ಟಾರಿಕಾ ತಂಡವನ್ನು ಎದುರಿಸಲಿದೆ. ಕೊಲಂಬಿಯ ತಂಡ ಮತ್ತೊಂದು ಪಂದ್ಯದಲ್ಲಿ ಪರಾಗ್ವೆ ತಂಡವನ್ನು ಮುಖಾಮುಖಿಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News