ದಾದ್ರಿಯಲ್ಲಿ ಮಹಾ ಪಂಚಾಯತ್‌ಗೆ ಕರೆ; ನಿಷೇಧಾಜ್ಞೆ ಜಾರಿ-ಭದ್ರತೆ ಬಿಗಿ

Update: 2016-06-06 13:54 GMT

ಲಕ್ನೊ, ಜೂ.6: ಗೋ ಮಾಂಸ ಭಕ್ಷಣೆ ವದಂತಿಯ ಕಾರಣ 9 ತಿಂಗಳ ಹಿಂದೆ ಗುಂಪು ದಾಳಿಗೆ ಬಲಿಯಾಗಿದ್ದ ಮುಹಮ್ಮದ್ ಇಖ್ಲಾಕ್‌ನ ಕುಟುಂಬದ ವಿರುದ್ಧ ಗೋಹತ್ಯೆಯ ಆರೋಪದಲ್ಲಿ ಎಫ್‌ಐಆರ್ ದಾಖಲಿಸಬೇಕೆಂಬ ಆಗ್ರಹದ ಸಂಬಂಧ ಇಂದು ಮಹಾ ಪಂಚಾಯತ್ ಒಂದು ನಡೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ದಾದ್ರಿಯ ಬಿಶಾಡಾ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

ಗೌತಂ ಬುದ್ಧನಗರ ಜಿಲ್ಲಾ ದಂಡಾಧಿಕಾರಿ ಎನ್.ಪಿ.ಸಿಂಗ್, ದಂಡ ಪ್ರಕ್ರಿಯಾ ಸಂಹಿತೆಯ ಸೆ. 144ನ್ನು ಜಾರಿಗೊಳಿಸಿದ್ದು, ಐವರು ಅಥವಾ ಹೆಚ್ಚು ಮಂದಿ ಒಟ್ಟು ಸೇರುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

2015ರ ಸೆಪ್ಟಂಬರ್‌ನಲ್ಲಿ ನಡೆದ ಅಖ್ಲಾಕ್ ಹತ್ಯೆ ಪ್ರಕರಣದ ಆರೋಪಿಯ ಬಂಧುಗಳು ಸಹಿತ ಬಿಶಾಡಾ ಗ್ರಾಮದ ನಿವಾಸಿಗಳು ನಿನ್ನೆ ಗೌತಂ ಬುದ್ಧ ನಗರದ ಎಸ್‌ಎಸ್‌ಪಿಯನ್ನು ಭೇಟಿಯಾಗಿ, ಅಖ್ಲಾಕ್‌ನ ಮನೆಯಲ್ಲಿ ಪತ್ತೆಯಾಗಿದ್ದ ಮಾಂಸವು ದನ ಅಥವಾ ಕರುವಿನದೆಂದು ವಿಧಿ ವಿಜ್ಞಾನ ವರದಿ ಸ್ಪಷ್ಟಪಡಿಸಿರುವುದರಿಂದ ಆತನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದರು.

ಅಖ್ಲಾಕ್‌ನ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ವಿಫಲರಾಗಿರುವುದರಿಂದ ಗ್ರಾಮದಲ್ಲಿ ಮಹಾ ಪಂಚಾಯತ್ ಒಂದನ್ನು ನಡೆಸಲಾಗುವುದೆಂದು ಆರೋಪಿ ವಿಶಾಲ್ ರಾಣಾ ಎಂಬಾತನ ತಂದೆ ಸಂಜಯ್ ರಾಣಾ ಎಂಬವರು ಬೆದರಿಕೆ ಹಾಕಿದ್ದರು.

ವಿಎಚ್‌ಪಿ ನಾಯಕ ಸುರೀಂದರ್ ಜೈನ್ ನಿನ್ನೆ ಗ್ರಾಮಕ್ಕೆ ಭೇಟಿ ನೀಡಿದ್ದು, ಆರೋಪಿಗಳನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆಯೆಂದು ಪ್ರತಿಪಾದಿಸಿದ್ದರು.

ಇದೇ ವೇಳೆ, ಬಿಜೆಪಿ ನಾಯಕ ವಿನಯ್ ಕಟಿಯಾರ್, ಅಖ್ಲಾಕ್ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಬೇಕೆಂಬ ಬೇಡಿಕೆಯನ್ನು ಬೆಂಬಲಿಸಿದ್ದು, ಅವರಿಗೆ ನೀಡಿರುವ ಪರಿಹಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಆದರೆ, ಕಾಂಗ್ರೆಸ್, ಬಿಜೆಪಿ ನಾಯಕರ ಹೇಳಿಕೆಗಳನ್ನು ಟೀಕಿಸಿದ್ದು, ಅದರಿಂದ ವಾತಾವರಣ ಹದಗೆಡಬಹುದೆಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News