ಕಂಡ್ಲೂರು ಸಂತ ಅಂತೋನಿ ಮೂರ್ತಿ ಧ್ವಂಸ

Update: 2016-06-06 18:31 GMT

ಕುಂದಾಪುರ, ಜೂ.6: ಬಸ್ರೂರು ಸಂತ ಪಿಲಿಫ್ ನೇರಿ ಚರ್ಚ್‌ನ ಅಧೀನದಲ್ಲಿರುವ ಕಂಡ್ಲೂರಿನ ಸಂತ ಅಂತೋನಿಯವರ ಪ್ರಾರ್ಥನಾ ಮಂದಿರದ ಗೇಟಿನ ಸಮೀಪದ ಗುಡಿಯಲ್ಲಿದ್ದ ಸಂತ ಅಂತೋನಿಯವರ ಮೂರ್ತಿ ಧ್ವಂಸಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಬೆಳಗ್ಗೆ ಇಗರ್ಜಿಗೆ ಭಕ್ತರು ಆಗಮಿಸಿದಾಗ ಸಂತ ಅಂತೋನಿಯವರ ಮೂರ್ತಿಎರಡು ತುಂಡಾಗಿ ಕೆಳಗೆ ಬಿದ್ದಿರುವುದು ಕಂಡುಬಂತು. ಕಿಡಿಗೇಡಿಗಳು ನಿನ್ನೆ ರಾತ್ರಿ ವೇಳೆ ಸಂತ ಅಂತೋನಿಯವರ ಮೂರ್ತಿಯನ್ನು ಗುಡಿಯಿಂದ ತೆಗೆದು ಕೆಳಗೆ ಹಾಕಿ ಧ್ವಂಸಗೊಳಿಸಿದ್ದಾರೆ ಎಂದು ಚರ್ಚ್‌ನ ಉಪಾಧ್ಯಕ್ಷ ಜಾರ್ಜ್ ಬರೆಟ್ಟೊ ದೂರು ನೀಡಿದ್ದು, ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಸ್ರೂರು ಸಂತ ಫಿಲಿಪ್ ನೇರಿ ಚರ್ಚ್‌ನ ಧರ್ಮಗುರು ವಂ.ವಿಶಾಲ್ ಲೋಬೊ ಭೇಟಿ ನೀಡಿದರು. ಪ್ರಾರ್ಥನಾ ಮಂದಿರದ ಪರಿಸರದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಗುಡಿಯಲ್ಲಿ ಆಳವಡಿಸಿರುವ ಗಾಜಿನಲ್ಲಿ ಯಾವುದೇ ಬೆರಳಚ್ಚುಗಳು ಕಂಡು ಬಂದಿಲ್ಲ. ಅದೇ ರೀತಿ ಅಲ್ಲಿ ಸಮೀಪ ಯಾವುದೇ ಕಲ್ಲುಗಳು ಕೂಡ ಕಾಣಿಸಿಲ್ಲ. ಆದ್ದರಿಂದ ಇದು ದುಷ್ಕರ್ಮಿಗಳ ಕೃತ್ಯ ಎಂಬುದಾಗಿ ಹೇಳಲು ಸಾಧ್ಯವಿಲ್ಲ. ನಿನ್ನೆ ರಾತ್ರಿ ಬೀಸಿದ ಭಾರೀ ಗಾಳಿಮಳೆಗೂ ಈ ಮೂರ್ತಿ ಕೆಳಗೆ ಬಿದ್ದು ತುಂಡಾಗಿರುವ ಸಾಧ್ಯತೆ ಇದೆ. ಈ ಎರಡು ದಿಕ್ಕಿನಲ್ಲಿಯೂ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಕುಂದಾಪುರ ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಡಿವೈಎಸ್ಪಿ ಮಂಜುನಾಥ್ ಶೆಟ್ಟಿ, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್, ಉಪನಿರೀಕ್ಷಕ ನಾಸಿರ್ ಹುಸೈನ್ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News