ರುಬಿಕ್ ಕ್ಯೂಬ್‌ನಲ್ಲಿ ಪೃಥ್ವಿಶ್‌ನಿಂದ ಇಂಡಿಯಾ ಬುಕ್ ಆಫ್ ರೆಕಾರ್ಡ್

Update: 2016-06-07 15:36 GMT

ಉಡುಪಿ, ಜೂ.7: ಒಂದು ವರ್ಷದಲ್ಲಿ ಅತಿಹೆಚ್ಚು ಮಕ್ಕಳಿಗೆ ಫಝಲ್ ಗೇಮ್ ‘ರುಬಿಕ್ ಕ್ಯೂಬ್’ ತರಬೇತಿ ನೀಡುವ ಮೂಲಕ ವಿಶಿಷ್ಟ ಸಾಧನೆ ಮಾಡಿರುವ ಬ್ರಹ್ಮಾವರ ಚೇರ್ಕಾಡಿ ಪೇತ್ರಿಯ ಪೃಥ್ವಿಶ್ (21) ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

2015ರಲ್ಲಿ ಮಂಗಳೂರು, ಉಡುಪಿ, ಧರ್ಮಸ್ಥಳ, ಪುತ್ತೂರು ಪರಿಸರದ ಒಟ್ಟು ಎಂಟು ವಿವಿಧ ವಿದ್ಯಾಸಂಸ್ಥೆಗಳಲ್ಲಿ ನಡೆಸಿದ ಕಾರ್ಯಾಗಾರದಲ್ಲಿ ಒಟ್ಟು 500 ವಿದ್ಯಾರ್ಥಿಗಳಿಗೆ ರುಬಿಕ್ ಕ್ಯೂಬ್‌ನಲ್ಲಿ ಪ್ರಾಥಮಿಕ ತರಬೇತಿ ನೀಡಿದ ಖ್ಯಾತಿಯನ್ನು ಪೃಥ್ವಿಶ್ ಪಡೆದಿದ್ದಾರೆ.

ಇವರು ಪ್ರತಿ ಸಂಸ್ಥೆಯಲ್ಲಿ ಮೂರು ಗಂಟೆಗಳ ಕಾಲ ಕಾರ್ಯಾಗಾರ ನಡೆಸಿ ಮಕ್ಕಳಿಗೆ ರುಬಿಕ್ ಕ್ಯೂಬ್‌ನ ಕುರಿತು ಪ್ರಥಮ ಹಂತದ ತರಬೇತಿ ನೀಡುತ್ತಾರೆ. ಮುಂದೆ ಮಕ್ಕಳೆ ಅದರಲ್ಲಿ ವಿಶೇಷ ಶ್ರಮ ವಹಿಸಿ 10 ವಿಧದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಾರೆ. ಇವರು 2015ರ ಎಪ್ರಿಲ್‌ನಲ್ಲಿ ಈ ದಾಖಲೆಗೆ ಅರ್ಜಿ ಸಲ್ಲಿಸಿ ಅವರ ನಿಯಮಗಳ ಪ್ರಕಾರ ಎಲ್ಲ ದಾಖಲೆಗಳನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಕಳುಹಿಸಿಕೊಟ್ಟಿದ್ದರು. ಇದನ್ನು ಪರಿಶೀಲಿಸಿ ಮಾನ್ಯ ಮಾಡಿದ ಸಂಸ್ಥೆಯು ಎ.25ರಂದು ಈ ಹೊಸ ದಾಖಲೆಯನ್ನು ಪೃಥ್ವಿಶ್ ಹೆಸರಿಗೆ ನೀಡಿದೆ.

ಉಜಿರೆಯ ಎಸ್‌ಡಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವ ಇವರು ಪೇತ್ರಿಯ ಶ್ಯಾಮ್ ಪ್ರಸಾದ್ ಹಾಗೂ ಪ್ರಸನ್ನ ಪ್ರಸಾದ್ ದಂಪತಿ ಪುತ್ರ. ಇವರ ಬಳಿ ಸುಮಾರು 13 ವಿಧದ ಕ್ಯೂಬ್ ಸಂಗ್ರಹಗಳಿವೆ. ಇವರು ರುಬಿಕ್ ಮ್ಯಾಜಿಕ್ ಎಂಬ ಪುಸ್ತಕ ಕೂಡ ಬರೆದಿದ್ದಾರೆ. ಅತ್ಯಂತ ವೇಗದಲ್ಲಿ ರುಬಿಕ್ ಕ್ಯುಬ್ ಬಗೆಹರಿಸುವ ಮೂಲಕ ದಾಖಲೆ ಮಾಡಬೇಕೆಂಬ ಪ್ರಯತ್ನದಲ್ಲಿಯೂ ಇವರಿದ್ದಾರೆ.

‘ನನ್ನ ತಮ್ಮ ಒಂದು ಗಂಟೆಯಲ್ಲಿ 59 ಚಿತ್ರಗಳನ್ನು ದಾರದಲ್ಲಿ ಬಿಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದನು. ಇದೇ ಪ್ರೇರಣೆಯಿಂದ ರುಬಿಕ್ ಕ್ಯೂಬ್‌ನಲ್ಲಿ ದಾಖಲೆ ಮಾಡಬೇಕೆಂಬ ಹಂಬಲದಿಂದ ಈ ಪ್ರಯತ್ನಕ್ಕೆ ಕೈ ಹಾಕಿದೆ. ಇದು ಯಶಸ್ವಿಯಾಗಿದೆ. ಮುಂದೆ ನಮ್ಮ ಪ್ರದೇಶದ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ವೇಗದ ಕ್ಯೂಬರ್‌ಗಳನ್ನಾಗಿ ಮಾಡುವುದು ನನ್ನ ಗುರಿಯಾಗಿದೆ’ ಎಂದು ಪೃಥ್ವಿಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News