ಅನುಪಮಾ ಶೆಣೈ ರಾಜೀನಾಮೆ: ಆರೋಪ-ಪ್ರತ್ಯಾರೋಪ
ಬೆಂಗಳೂರು.ಜೂ.7: ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ ವಿಷಯಕ್ಕೆ ರಾಜಕೀಯ ಪಕ್ಷಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅನುಪಮಾ ಶೆಣೈ ರಾಜೀನಾಮೆ ವಿಷಯ ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ಅನುಪಮಾ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಬೆಂಬಲದ ಮಹಾಪೂರವನ್ನೇ ಹರಿಸುತ್ತಿದ್ದರೆ, ಜನಪ್ರತಿನಿಧಿಗಳು ಮಾತ್ರ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಬಾರಿ ಸಚಿವ ಪರಮೇಶ್ವರ ನಾಯ್ಕ ಒತ್ತಡದಿಂದ ಸರಕಾರ ಅನುಪಮಾ ಶೆಣೈ ವರ್ಗಾವಣೆ ಮಾಡಿದ್ದಾಗ, ಅನುಪಮಾ ಬೆಂಬಲಕ್ಕೆ ನಿಂತಿದ್ದ ಪ್ರತಿಪಕ್ಷ ಬಿಜೆಪಿ ಈ ಬಾರಿ ಮಾತ್ರ ಯೂ ಟರ್ನ್ ತೆಗೆದುಕೊಂಡಿದೆ. ಅನುಪಮಾ ಶೆಣೈ ರಾಜೀನಾಮೆ ಕೊಡಬಾರದಿತ್ತು ಎಂದು ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಹೇಳಿದ್ದಾರೆ.
ಸರಕಾರಿ ಅಧಿಕಾರಿಯಾಗಿ, ಸರಕಾರವನ್ನೇ ಬಹಿರಂಗ ಟೀಕೆ ಮಾಡಿದ ಕಾರಣಕ್ಕೆ ಅನುಪಮಾ ಶೆಣೈ ವಿರುದ್ಧ ಸ್ಪೀಕರ್ ಕಾಗೋಡು ತಿಮ್ಮಪ್ಪ ಗುಡುಗಿದ್ದಾರೆ. ಅನುಪಮಾ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರಕಾರಿ ಅಧಿಕಾರಿಯಾಗಿದ್ದು ಸರಕಾರವನ್ನು ಬಹಿರಂಗವಾಗಿ ಟೀಕಿಸಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ಸುರೇಶ್ ಕುಮಾರ್ ಮಾತನಾಡಿ, ಅನುಪಮಾ ಶೆಣೈ ರಾಜೀನಾಮೆ ಕೊಡಬಾರದಿತ್ತು. ಅಧಿಕಾರದಲ್ಲಿದ್ದುಕೊಂಡೆ ವ್ಯವಸ್ಥೆಯ ಸುಧಾರಣೆಗೆ ಯತ್ನಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಇದೊಂದು ಅನಾಗರಿಕ ಸರಕಾರ. ಭ್ರಷ್ಟ, ಕಳ್ಳರ, ದರೋಡೆಕೋರರ ರಕ್ಷಣೆಗೆ ನಿಂತಿದೆ. ಇಂತಹ ಸಂದರ್ಭದಲ್ಲಿ ಪ್ರಾಮಾಣಿಕ ಅಧಿಕಾರಿ ಅನುಪಮಾ ಶೆಣೈ ಅವರ ಪರವಾಗಿ ಜನ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಬಳ್ಳಾರಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ ಸದೆಬಡಿದ ದಿಟ್ಟ ಮಹಿಳಾಪೊಲೀಸ್ ಅಧಿಕಾರಿ ಈಗ ಅಕ್ರಮ ಮದ್ಯದ ಅಡ್ಡೆಯ ಮೇಲೆ ದಾಳಿ ಮಾಡಿ ಶಾಸಕರ ಹಾಗೂ ಸಚಿವರ ಕೆಂಗಣ್ಣಿಗೆ ಗುರಿ ಯಾಗಿದ್ದಾರೆ.ಅನುಪಮಾ ಶೆಣೈಯಂತಹ ಕೆಲವೇ ಕೆಲವುಅಧಿಕಾರಿಗಳ ರಕ್ಷಣೆಗೆ ರಾಜ್ಯದ ಜನತೆ ಬೀದಿಗಿಳಿದು ಹೋರಾಟನಡೆಸಬೇಕು. ಇಲ್ಲದಿದ್ದರೆ ಒಳ್ಳೆಯ ಅಧಿಕಾರಿಗಳನ್ನ ಕಳೆದುಕೊಳ್ಳುತ್ತೇವೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಅನುಪಮಾ ಶಣೈ ರಾಜೀನಾಮೆ ಬಗ್ಗೆ ಪೊಲೀಸ್ ಮಹಾ ನಿರ್ದೇಶಕರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ರಾಜೀನಾಮೆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸುತ್ತಾರೆ, ಪೊಲೀಸ್ ಮಹಾ ನಿರ್ದೇಶಕರಿಗೆ ರಾಜೀನಾಮೆ ಪತ್ರ ತಲುಪಿದೆ ಎಂದರು.
ಡಿವೈಎಸ್‌ಪಿ ಅನುಪಮಾ ಶೆಣೈ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ರಾಜೀನಾಮೆಗೆ ಒತ್ತಾಯಿಸಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪಕ್ಷೇತರ ಶಾಸಕರು ಮುಂಬೈಗೆ ತೆರಳಿರುವ ಬಗ್ಗೆ ರಾಜ್ಯಪಾಲರು ವರದಿ ಕೇಳಿದ್ದಾರೆ ಎಂಬುದನ್ನು ನಿರಾಕರಿಸಿದ ಅವರು, ಯಾವುದೇ ವರದಿಯನ್ನು ರಾಜ್ಯಪಾಲರು ಕೇಳಿಲ್ಲ ಎಂದರು.
ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿರುವ ಅನುಪಮಾ ಶೆಣೈ ಇದೀಗ ಫೇಸ್‌ಬುಕ್‌ನಲ್ಲಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಅವರ ವಿರುದ್ಧ ಸಮರ ಸಾರಿದ್ದು, ‘‘ನಾನು ರಾಜೀನಾಮೆ ನೀಡಿದ್ದೇನೆ. ನಿಮ್ಮ ರಾಜೀನಾಮೆ ಯಾವಾಗ..?’’ ಎಂದು ಪ್ರಶ್ನಿಸಿದ್ದಾರೆ.
ಕೂಡ್ಲಿಗಿ ಜನ ಲಿಕ್ಕರ್ ಲಾಬಿಗೆ ಶರಣೆನ್ನದೆ, ರಮ್ ಸರಕಾರ ಎಂದು ಅನುಪಮಾ ಶೆಣೈ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್ ಲೋಡ್ ಮಾಡಿದ್ದರು. ಆದರೆ ಈ ಬಗ್ಗೆ ಪ್ರತಿಕ್ರಯಿಸಿರುವ ಸಚಿವ ಪರಮೇಶ್ವರ್ ನಾಯಕ್ ಅನುಪಮಾ ಶೆಣೈ ರಾಜೀನಾಮೆ ಬಗ್ಗೆ ತಾವೇನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಅದರಿಂದ ನನಗೇನು ಆಗಬೇಕಾಗಿಲ್ಲ ಎಂದು ಹೇಳಿದ್ದಾರೆ.