200ಕ್ಕೂ ಅಧಿಕ ಕದ್ದ ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಿದ ಅಮೆರಿಕ

Update: 2016-06-07 16:54 GMT

ವಾಶಿಂಗ್ಟನ್, ಜೂ. 7: ಭಾರತದಿಂದ ಕದ್ದು ಸಾಗಿಸಲಾದ ಬೆಲೆ ಬಾಳುವ ಐತಿಹಾಸಿಕ ವಸ್ತುಗಳನ್ನು ಅಮೆರಿಕದ ಸುಮಾರು 15 ವಸ್ತುಸಂಗ್ರಹಾಲಯಗಳು ಹಿಂದಿರುಗಿಸಲಿವೆ. ಈ ಬಗ್ಗೆ 2012ರಿಂದ ತನಿಖೆ ನಡೆಯುತ್ತಿದ್ದು, ಅದರ ಫಲಶ್ರುತಿಯಾಗಿ ಈ ಬೆಳವಣಿಗೆ ನಡೆದಿದೆ.

ಭಾರವಾಗಿರುವ ಸುಮಾರು ಏಳು ಸಂಶಯಾಸ್ಪದ ಪಾತ್ರೆಗಳನ್ನು ಹಡಗಿನಲ್ಲಿ ಅಮೆರಿಕಕ್ಕೆ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಫೆಡರಲ್ ತನಿಖಾ ಸಂಸ್ಥೆಗಳಿಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ತನಿಖೆ ಆರಂಭವಾಗಿತ್ತು. ಆ ವಸ್ತುಗಳನ್ನು ‘‘ಮಾರ್ಬಲ್ ಗಾರ್ಡನ್ ಟೇಬಲ್ ಸೆಟ್’’ಗಳೆಂದು ಬಣ್ಣಿಸಲಾಗಿತ್ತು.

 ತಪಾಸಣೆಯ ವೇಳೆ ಈ ಪಾತ್ರೆಗಳಲ್ಲಿ ಅತ್ಯಮೂಲ್ಯವಾದ ಪ್ರಾಚೀನ ವಸ್ತುಗಳಿರುವುದು ಪತ್ತೆಯಾಯಿತು. ಘಟನೆಗೆ ಸಂಬಂಧಿಸಿ ಆರು ಮಂದಿಯನ್ನು ಬಂಧಿಸಲಾಯಿತು ಹಾಗೂ 10 ಕೋಟಿ ಡಾಲರ್‌ಗೂ (ಸುಮಾರು 667 ಕೋಟಿ ರೂಪಾಯಿ) ಅಧಿಕ ವೌಲ್ಯದ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಯಿತು.

ಪುರಾತನ ಕಲಾಕೃತಿಗಳ ಕಳ್ಳಸಾಗಣೆದಾರ ಸುಭಾಶ್ ಕಪೂರ್‌ನನ್ನು ಬಂಧಿಸಲಾಯಿತು. ಆತ ಈಗ ಭಾರತದಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾನೆ. ತಮಿಳುನಾಡಿನ ವಿವಿಧ ದೇವಾಲಯಗಳಿಂದ ಕದ್ದ ಪುರಾತನ ವಿಗ್ರಹಗಳು ಅವುಗಳಾಗಿದ್ದವು.

ಸೋಮವಾರ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಟಾರ್ನಿ ಜನರಲ್ ಲಾರೆಟಾ ಲಿಂಚ್ ಅಧ್ಯಕ್ಷತೆ ವಹಿಸಿದ ಹಸ್ತಾಂತರ ಸಮಾರಂಭವೊಂದರಲ್ಲಿ ಅಮೆರಿಕ ಸರಕಾರವು 200ಕ್ಕೂ ಅಧಿಕ ಕಲಾಕೃತಿಗಳನ್ನು ಭಾರತಕ್ಕೆ ಹಸ್ತಾಂತರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News