ಚುಟುಕು ಸುದ್ದಿಗಳು

Update: 2016-06-07 18:38 GMT

ಬಟ್ಟೆಯಂಗಡಿಯಲ್ಲಿ ಬೆಂಕಿ: ಅಪಾರ ನಷ್ಟ
 ಕಾಸರಗೋಡು, ಜೂ. 7: ನಗರದ ಬಟ್ಟೆಯಂಗಡಿಯಲ್ಲಿ ಸೋಮವಾರ ರಾತ್ರಿನಡೆದ ಅಗ್ನಿ ಅನಾಹುತದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
 ಸಾಯಿ ಕಲೆಕ್ಷನ್ ಎಂಬ ಮಳಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿಗಾಹುತಿ ಯಾಗಿದ್ದು, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದಸಿಬ್ಬಂದಿ ಬೆಂಕಿ ಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಮಳಿಗೆಯಲ್ಲಿದ್ದ ಎಲ್ಲಾ ವಸ್ತು ಗಳು ಅಗ್ನಿಗಾಹುತಿಯಾಗಿದ್ದು, ಸುಮಾರು 35 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಮೃತದೇಹ ಪತ್ತೆ: ಆತ್ಮಹತ್ಯೆ ಶಂಕೆ
ಉಪ್ಪಿನಂಗಡಿ, ಜೂ. 7: ಇಲ್ಲಿನ ಕೆಂಪಿಮಜಲು ಬಳಿಯ ಸನ್ಯಾಸಿಗಯದ ಪಕ್ಕ ನದಿದಡದಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿ ರಬಹುದೆಂದು ಶಂಕಿಸಲಾಗಿದೆ. ಪುತ್ತೂರು ತಾಲೂಕಿನ ಹಳೆನೇರೆಂಕಿ ನಿವಾಸಿ ರಾಮಣ್ಣ ಗೌಡ (40) ಮೃತಪಟ್ಟ ವ್ಯಕ್ತಿ. ಕೂಲಿಕಾರ್ಮಿಕರಾಗಿರುವ ರಾಮಣ್ಣ ಗೌಡ ಮೇ 22ರಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಮೇ 25ರಂದು ಮೃತರ ಪತ್ನಿ ಬೇಬಿ ಕಡಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇವರ ಮೃತದೇಹ ಇಂದುಕೆಂಪಿಮಜಲು ಬಳಿಯ ನೇತ್ರಾವತಿ ನದಿ ದಡದಲ್ಲಿ ಪತ್ತೆಯಾಗಿದೆ. ಮಾನಸಿಕವಾಗಿ ನೊಂದ ಇವರು ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಟ್ಯಾಕ್ಟರಿನಡಿಗೆ ಬಿದ್ದು ಕೂಲಿ ಕಾರ್ಮಿಕ ಮೃತ್ಯು
 ಉಡುಪಿ, ಜೂ.7: ನಗರಸಭೆ ವ್ಯಾಪ್ತಿಯಲ್ಲಿ ಕಸ ಸಾಗಿಸುವ ಟ್ಯಾಕ್ಟರ್‌ನಿಂದ ಆಯತಪ್ಪಿ ಚಕ್ರದಡಿಗೆ ಬಿದ್ದು ಉತ್ತರ ಕರ್ನಾಟಕದ ಅಪರಿಚಿತ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬೀಡಿನಗುಡ್ಡೆ ಜಂಕ್ಷನ್ ಬಳಿ ಮಂಗಳವಾರ ಬೆಳಗ್ಗೆ 11ಗಂಟೆಗೆ ನಡೆದಿದೆ.
ವೆಂಕಟರಮಣ ದೇವಸ್ಥಾನ ಕಡೆಯಿಂದ ಬೀಡಿನಗುಡ್ಡೆ ಕಡೆಗೆ ಬರುತ್ತಿದ್ದ ಟ್ರ್ಯಾಕ್ಟರ್ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಟ್ಯಾಕ್ಟರ್‌ನ ದೊಡ್ಡ ಟಯರಿನ ಮಡ್‌ಗಾರ್ಡ್ ಮೇಲೆ ಕುಳಿತಿದ್ದ ಕೂಲಿ ಕಾರ್ಮಿಕ ಕೆಳಗೆ ಬಿದ್ದಿದ್ದು, ಆ ವೇಳೆ ಟ್ರ್ಯಾಕ್ಟರ್‌ನ ಹಿಂದಿನ ಚಕ್ರವು ಅವರ ಮೇಲೆ ಹರಿಯಿತು. ಇದರಿಂದ ಗಂಭೀರವಾಗಿ ಗಾಯ ಗೊಂಡ ಅವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು.
ಮೃತ ಕಾರ್ಮಿಕ ನಿನ್ನೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದನು. ಹಾಗಾಗಿ ಅವರ ಪರಿಚಯ ಯಾರಿಗೂ ಇಲ್ಲ. ಇದೀಗ ಮೃತದೇಹವನ್ನು ಅಜ್ಜರಕಾಡು ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಪತ್ತೆಗಾಗಿ ಪೊಲೀಸರು ಅವರ ಛಾಯಾಚಿತ್ರವನ್ನು ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣದ ಬಳಿ ಅಂಟಿಸಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ನಗದು ಕಳವು
ಕಾರ್ಕಳ, ಜೂ. 7: ಮುಡಾರು ಗ್ರಾಮದ ಬಜಗೋಳಿ ಎಂಬಲ್ಲಿ ಜೂ.6 ರಂದು ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಬಜಗೋಳಿ ಸೊಸೈಟಿ ಬಳಿಯ ನಿವಾಸಿ ಸುಂದರ ಶೆಟ್ಟಿ ಎಂಬವರ ಮನೆಯ ಹಿಂಬದಿ ಬಾತ್‌ರೂಮ್‌ನ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳರು ಮನೆಯ ್ದ ಕಪಾಟಿನಲ್ಲಿಟ್ಟದ್ದ 50,000ರೂ. ನಗದನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಕುಂದಾಪುರ, ಜೂ. 7: ವೈಯಕ್ತಿಕ ಕಾರಣದಿಂದ ಮನನೊಂದ ಕಾವ್ರಾಡಿ ಗ್ರಾಮದ ಕಂಡ್ಲೂರಿನ ನಿವಾಸಿ ಶೀನ ಯಾನೆ ಶ್ರೀನಿವಾಸ (60) ಎಂಬವರು ಜೂ.6ರಂದು ಸಂಜೆ ಮನೆಯ ಕೋಣೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ: ಕಲ್ಯಾ ಗ್ರಾಮದ ಕುಂಟಾಡಿ ಅಶೋಕನಗರ ಕೈಕಂಬ ನಿವಾಸಿ ಸುರೇಖಾ(28) ಜೂ. 6ರಂದು ಸಂಜೆ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಟ್ಕಾ : ಓರ್ವನ ಸೆರೆ
ಕುಂದಾಪುರ, ಜೂ. 7: ಕುಂದಾಪುರ ಅಚಲಾ ಸಭಾಭವನದ ಬಳಿ ಜೂ.6ರಂದು ಅಪರಾಹ್ನ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ರಾಜೀವ ಮೊಗವೀರ(56) ಎಂಬಾತನನ್ನು ಕುಂದಾಪುರ ಪೊಲೀಸರು ಬಂಧಿಸಿ, 710ರೂ. ನಗದು ವಶಪಡಿಸಿಕೊಂಡಿದ್ದಾರೆ.

ಜೂ.12ರಂದು ಕೆಥೊಲಿಕ್ ಸಭಾ ಸಹಮಿಲನ
ಉಡುಪಿ, ಜೂ.7: ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ವಾರ್ಷಿಕ ಮಹಾಸಭೆ ಹಾಗೂ ಸಹಮಿಲನ ಕಾರ್ಯಕ್ರಮವು ಉಡುಪಿ ಕನ್ನರಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ಜೂ.12ರಂದು ಬೆಳಿಗ್ಗೆ 9ಗಂಟೆಗೆ ನಡೆಯಲಿದೆ.ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತದ ಫಾ. ಮೊನ್ಸಿಂಜ್ಞೊರ್ ಬ್ಯಾಪ್ಟಿಸ್ಟ್ ಮಿನೇಜಸ್ ಉದ್ಘಾಟಿಸಲಿದ್ದು, ಕೆಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷ ವಿಲಿಯಂ ಮಚಾದೊ ಅಧ್ಯಕ್ಷತೆ ವಹಿಸಲಿರುವರು. ಈ ಸಂದರ್ಭದಲ್ಲಿ ಫಾ. ರಿಚಾರ್ಡ್ ಮಿನೇಜಸ್ ಅವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಜಿಪಂ ಹಾಗೂ ತಾಪಂ ಚುನಾವಣೆಯ ವಿಜಯಿ ಅಭ್ಯರ್ಥಿಗಳಿಗೆ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಮಾಡಲಾಗುವುದು ಎಂದು ಸಂಘಟನೆ ಕಾರ್ಯದರ್ಶಿ ಆಲಿಸ್ ರೊಡ್ರಿಗಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಂಡ್ಲೂರು ಘಟನೆಗೆ ಖಂಡನೆ
ಉಡುಪಿ, ಜೂ.7: ಕುಂದಾಪುರ ತಾಲೂಕಿನ ಕಂಡ್ಲೂರು ಸಂತ ಅಂತೋನಿಯವರ ಪ್ರಾರ್ಥನಾ ಮಂದಿರದಲ್ಲಿ ಸಂತ ಅಂತೋನಿ ವಿಗ್ರಹವನ್ನು ಭಗ್ನಗೊಳಿಸಿರುವ ಘಟನೆಯನ್ನು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ತೀವ್ರವಾಗಿ ಖಂಡಿಸಿದೆ.
 ಪೊಲೀಸರು ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಕೃತ್ಯ ಎಸಗಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಖಲೀಲ್ ಅಹ್ಮದ್ ಹಾಗೂ ಕಾರ್ಯದರ್ಶಿ ಲುವಿಸ್ ಡಿ ಅಲ್ಮೇಡಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.


ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉಡುಪಿ, ಜೂ. 7: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಉಡುಪಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ, ವಕೀಲರ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮ ಜೂ.12ರಂದು ಬೆಳಗ್ಗೆ 10:30ಕ್ಕೆ ಆದಿಉಡುಪಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಶಂಕರ ಬಿ ಅಮರಣ್ಣವರ ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ. ಅಂಗನವಾಡಿ ಕೇಂದ್ರದ ಸಹಾಯಕಿಗೆ ಬೀಳ್ಕೊಡುಗೆ ಕೊಣಾಜೆ, ಜೂ.4: ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ 18 ವರ್ಷಗಳ ಕಾಲ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ರಾಜೀವಿಗೆ ಬೀಳ್ಕೊಡುಗೆ ಕಾರ್ಯಕ್ರಮವು ನಡೆಯಿತು.ಇರಾ ಗ್ರಾಪಂ ಅಧ್ಯಕ್ಷ ಅಬ್ದುರ್ರಝಾಕ್ ಕುಕ್ಕಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಅಂಗನವಾಡಿ ಮೇಲ್ವಿಚಾರಕಿ ಗುಣವತಿ, ಇರಾ ಯುವಕ ಮಂಡಲದ ಅಧ್ಯಕ್ಷ ಅದ್ರಾಮ ಇರಾ, ನಿವೃತ್ತ ಸರಕಾರಿ ನೌಕರ ಟಿ.ವಾಮನ ಪೂಜಾರಿ, ಭಾರತ್ ಫ್ರೆಂಡ್ಸ್ ಕ್ಲಬ್‌ನ ರಾಮು ಇರಾ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಸ್ವಾಗತಿಸಿದರು. ನಿವೇದಿತಾ ಮಹಿಳಾ ಮಂಡಲದ ಕೋಶಾಧಿಕಾರಿ ಸುಜಾತಾ ವಿ. ಕೊಟ್ಟಾರಿ ವಂದಿಸಿದರು.

ಅಂಬ್ಲಮೊಗರು: ಅನುಸ್ಮರಣೆ ಕಾರ್ಯಕ್ರಮ
ಮಂಗಳೂರು, ಜೂ.7: ಎಸ್ಕೆಎಸ್ಸೆಸ್ಸೆಫ್ ಅಂಬ್ಲಮೊಗರು ಶಾಖೆಯ ಆಶ್ರಯದಲ್ಲಿ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಮತ್ತು ಸಮಸ್ತ ಮಹಾ ಸಮ್ಮೇಳನ ಕುಂಡೂರು ಜಮಾಅತ್ ಅಧ್ಯಕ್ಷ ಶರೀಫ್ ಕುಂಡೂರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಿನ್ಯ ಅಮೀರ್ ತಂಙಳ್ ದುಆ ಮಾಡಿದರು.ಮುದರ್ರಿಸ್ ಅಬೂಸ್ವಾಲಿಹ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಸ್ವದಖತ್ತುಲ್ಲಾ ಫೈಝಿ ಅನುಸ್ಮರಣಾ ಭಾಷಣ ಮಾಡಿದರು. ಹನೀಫ್ ನಿಝಾಮಿ ಮೊಗ್ರಾಲ್ ಪುತ್ತೂರು, ಸಚಿವ ಯು.ಟಿ.ಖಾದರ್, ಮಂಗಳೂರು ತಾಪಂ ಅಧ್ಯಕ್ಷ ಎಂ.ಟಿ.ಮೋನು, ಗ್ರಾಪಂ ಅಧ್ಯಕ್ಷ ರಫೀಕ್ ಮದಕ, ದೇರಳಕಟ್ಟೆ ರೇಂಜ್ ಅಧ್ಯಕ್ಷ ಲತೀಫ್‌ದಾರಿಮಿ ರೆಂಜಾಡಿ, ಪ್ರಧಾನ ಕಾರ್ಯದರ್ಶಿ ಫಾರೂಕ್ ದಾರಿಮಿ, ಜಮಾಅತ್ ಉಪಾಧ್ಯಕ್ಷ ಅಬೂಬಕರ್, ಕಾರ್ಯದರ್ಶಿ ಇಬ್ರಾಹೀಂ ಹಾಜಿ, ನುಸ್ರತುಲ್ ಇಸ್ಲಾಮ್ ಸಮಿತಿಯ ಕಾರ್ಯದರ್ಶಿ ಸಲೀಂ ಮದಕ, ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಫಝೀಲ್, ಕಾರ್ಯದರ್ಶಿ ವಹ್ಹಾಬ್ ಉಪಸ್ಥಿತರಿದ್ದರು. ಹಾಜಿ ಅಬ್ದುರ್ರಹ್ಮಾನ್ ದಾರಿಮಿ ಸ್ವಾಗತಿಸಿದರು. ಉಮರ್ ದಾರಿಮಿ ಪರ್ತಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News