ದಾರಿ ತಪ್ಪಿ ಕಾಸರಗೋಡಿಗೆ ಬಂದ ಸೌದಿ ಪ್ರಜೆಗೆ ದಿಕ್ಕಿಲ್ಲ!

Update: 2016-06-08 06:21 GMT

ಕಾಸರಗೋಡು, ಜೂ.8: ಈತ ಸೌದಿ ಪ್ರಜೆ. ನಾಲ್ಕು ವರ್ಷಗಳಿಂದ ಅನಾಥನಾಗಿದ್ದಾರೆ. ಆದರೂ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಈತನ ಬಗ್ಗೆ ಕಾಳಜಿ ಇಲ್ಲದಂತಾಗಿದೆ. ಏಳು ತಿಂಗಳಿನಿಂದ ಮಂಜೇಶ್ವರ ಪಾವೂರಿನ ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿರುವ ಅಬ್ದುಲ್ ಬಶೀರ್ ( 32) ಇದೀಗ ಅನಾಥನಾಗಿದ್ದು, ಯಾವ ಅಧಿಕಾರಿಯೂ ಇತ್ತ ಗಮನ ಹರಿಸಿಲ್ಲ.

ಇದರಿಂದ ಸ್ನೇಹಾಲಯದ ಮುಖ್ಯಸ್ಥರು ದಿಕ್ಕುತೋಚದಂತಾಗಿದ್ದಾರೆ. 2015ರ ಡಿ.20ರಂದು ಜಿಲ್ಲಾಡಳಿತದ ಆದೇಶದಂತೆ ಬಶೀರ್‌ನನ್ನು ಸ್ನೇಹಾಲಯಕ್ಕೆ ಸೇರಿಸಲಾಗಿತ್ತು. ಬಳಿಕ ಅಧಿಕಾರಿಗಳು, ಜನ ಪ್ರತಿನಿಧಿಗಳು ಈತನ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

2012ರ ಸೆಪ್ಟಂಬರ್‌ನಲ್ಲಿ ಕಾಸರಗೋಡು ನಗರದಲ್ಲಿ ಸಂಶಯಾಸ್ಪದವಾಗಿ ಅಲೆಯುತ್ತಿದ್ದ ಬಶೀರ್ನನ್ನು ವಶಕ್ಕೆ ಪಡೆದಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕಾಸರಗೋಡು ನ್ಯಾಯಾಲಯವು ಆತನಿಗೆ ಎರಡು ವರ್ಷ ಸೆರೆವಾಸ ವಿಧಿಸಿತ್ತು. ಕಣ್ಣೂರು ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಬಶೀರ್ ದಂಡ ಪಾವತಿಸಲು ಹಣವಿಲ್ಲದ ಕಾರಣ ಇನ್ನೂ ಒಂದು ತಿಂಗಳು ಸೆರೆಮನೆಯಲ್ಲಿದ್ದನಲ್ಲದೆ, ಡಿ.9ರಂದು ಬಿಡುಗಡೆಗೊಂಡಿದ್ದ.

ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಸಂದರ್ಭದಲ್ಲಿ ಮಾನಸಿಕ ಅಸ್ವಸ್ಥನಂತೆ ಕಂಡುಬಂದ ಹಿನ್ನೆಲೆಯಲ್ಲಿ 2014ರ ಎ.24ರಿಂದ ಒಂದು ವರ್ಷ ಕಲ್ಲಿಕೋಟೆ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತು. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲೂ ಅಧಿಕಾರಿಗಳು ಸೌದಿ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದರೂ ಈತನ ಕುರಿತು ಯಾವುದೇ ಮಾಹಿತಿ ಲಭಿಸಲಿಲ್ಲ. ಪೊಲೀಸರ ವಿಚಾರಣೆಯ ವೇಳೆ ತಂದೆ ಸೈಯದ್ ಹುಸೈನ್, ಮಕ್ಕಾ ನಕ್ಕಾಸ್, ಅರ್ಹತ್ತುಲ್ ಉಲೂಂ, ಸೌದಿ ಎಂಬ ವಿಳಾಸವನ್ನು ನೀಡಿದ್ದನು. ಆದರೆ ಈ ವಿಳಾಸವನ್ನು ಸಂಪರ್ಕಿಸಿದಾಗ ಈತನ ಮನೆಯವರ ಮಾಹಿತಿ ಲಭಿಸಲಿಲ್ಲ.

ಜೈಲಿನಿಂದ ಬಿಡುಗಡೆಗೊಂಡಿದ್ದ ಈತ ಕಾಸರಗೋಡು ಪೊಲೀಸರಿಗೆ ತಲೆನೋವಾಗಿದ್ದ. ಈತನ ಮನೆಯವರನ್ನು ಸಂಪರ್ಕಿಸಲು ಎಲ್ಲ ರೀತಿಯ ಪ್ರಯತ್ನವನ್ನು ಕಾಸರಗೋಡು ಪೊಲೀಸರು ಮತ್ತು ಜಿಲ್ಲಾಡಳಿತ ನಡೆಸಿತ್ತು. ಆದರೆ ಪ್ರಯೋಜನವಾಗಲಿಲ್ಲ. ಈತ ನೀಡಿದ ಮಾಹಿತಿಯಂತೆ ಸೌದಿ ರಾಯಭಾರಿ ಕಚೇರಿ ಮೂಲಕ ಪ್ರಯತ್ನಿಸಿದರೂ ಮನೆಯವರ ಬಗ್ಗೆ ಯಾವುದೇ ಮಾಹಿತಿ ಲಭಿಸಲಿಲ್ಲ. ಈತ ಪತ್ತೆಯಾಗುವ ಸಂದರ್ಭದಲ್ಲಿ ಯಾವುದೇ ದಾಖಲೆಗಳು ಲಭಿಸದ ಹಿನ್ನಲೆಯಲ್ಲಿ ಈ ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಬಶೀರ್‌ನನ್ನು ಏನು ಮಾಡಬೇಕೆಂಬ ಬಗ್ಗೆ ಪೊಲೀಸರಿಗೆ ಸವಾಲಾಗಿತ್ತು. ಒಂದು ವಾರಗಳ ಕಾಲ ಈತನಿಗೆ ಪೊಲೀಸ್ ಠಾಣೆ ಆಶ್ರಯ ನೀಡಿತ್ತು.

ಕೊನೆಗೆ ಕಾಸರಗೋಡು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಜಿಲ್ಲಾಧಿಕಾರಿಯ ಆದೇಶದಂತೆ 2015ರ ಡಿ. 20ರಂದು ಪಾವೂರಿನ ಸ್ನೇಹಾಲಯಕ್ಕೆ ಸೇರಿಸಲಾಗಿತ್ತ್ತು. ಬಶೀರ್ ಸೌದಿಯ ಮಸೀದಿಯಲ್ಲಿ ಕೆಲಸ ಮಾಡಿಕೊಂಡಿದ್ದನಂತೆ. ಅಲ್ಲಿಂದ ಬಾಂಗ್ಲಾ ದೇಶಕ್ಕೆ ತಲುಪಿ ಕೊಲ್ಕೊತ್ತಾಕ್ಕೆ ವಲಸೆ ಕಾರ್ಮಿಕರ ಜೊತೆ ತಲುಪಿ ಬಳಿಕ ಕೆಲ ಕಾಲ ಹೈದರಾಬಾದಿನಲ್ಲಿದ್ದು, ರೈಲಿನಲ್ಲಿ ಕಾಸರಗೋಡಿಗೆ ಬಂದವನು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದನಂತೆ.

ಈತನ ತಂದೆ ಪಾಕಿಸ್ತಾನ ಮೂಲದವರಾಗಿದ್ದು, ತಾಯಿ ಬರ್ಮಾದವರು ಎನ್ನಲಾಗಿದೆ. ಆದರೆ ನೈಜ ಮಾಹಿತಿ ಲಭಿಸುತ್ತಿಲ್ಲ. ಏಳು ತಿಂಗಳಿನಿಂದ ಸ್ನೇಹಾಲಯದ ಪರಿಪಾಲನೆಯಲ್ಲಿರುವ ಬಶೀರ್ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಯಾಗಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ. ಸ್ನೇಹಾಲಯದ ಇತರರ ಜೊತೆ ಕಾಲ ಕಳೆಯುತ್ತಿರುವ ಬಶೀರ್‌ಗೆ ತನ್ನ ತಾಯಿ ಮತ್ತು ಕುಟುಂಬದವರನ್ನು ನೋಡಬೇಕೆಂಬ ಆಸೆ. ಆದರೆ ಈತ ಈಗ ಅನಾಥವಾಗಿ ದಿನ ಕಳೆಯುತ್ತಿದ್ದಾರೆ.

ರಮಝಾನ್ ಸಂದರ್ಭದಲ್ಲಾದರೂ ಈತನಿಗೆ ಮನೆಗೆ ತಲುಪಬೇಕೆಂಬ ಮಹದಾಸೆ ಇದೆ. ಆದರೆ ದಾರಿ ತಪ್ಪಿಬಂದಿರುವ ಈತನ ಬಗ್ಗೆ ಕಿಂಚಿತ್ತೂ ಕಾಳಜಿ ಜಿಲ್ಲಾಡಳಿತಕ್ಕೆ ಇಲ್ಲದಂತಾಗಿದೆ. ಅಬ್ದುಲ್ ಬಶೀರ್‌ರನ್ನು ಸ್ನೇಹಾಲಯಕ್ಕೆ ಸೇರ್ಪಡೆಗೊಳಿಸಿದ ಬಳಿಕ ಈ ಬಗ್ಗೆ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ತಿಂಗಳಿನಿಂದ ಬಶೀರ್ ಇಲ್ಲಿಯೇ ಉಳಿದುಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದಷ್ಟು ಬೇಗ ಬಶೀರ್‌ನ ಪೋಷಕರನ್ನು ಹುಡುಕಿ ಅವರ ಬಳಿಗೆ ತಲುಪಿಸಬೇಕು.

ಸ್ಟ್ಯಾನಿ ಮ್ಯಾಥ್ಯೂ, ಡೈರಕ್ಟರ್ ಆಫ್ ಪ್ರಾಜೆಕ್ಟೃ್, ಸ್ನೇಹಾಲಯ.

Writer - ಸ್ಟೀಫನ್ ಕಯ್ಯರ್

contributor

Editor - ಸ್ಟೀಫನ್ ಕಯ್ಯರ್

contributor

Similar News