ಕಡಬ: ನೀರಿದ್ದೂ ಉಪಯೋಗಕ್ಕಿಲ್ಲದ ಸರಕಾರಿ ಕೊಳವೆ ಬಾವಿ

Update: 2016-06-08 06:42 GMT

ಕಡಬ,ಜೂ.8: ಜಿಲ್ಲೆಯ ಹಲವೆಡೆ ಕುಡಿಯಲು ನೀರಿಲ್ಲದೆ ಪ್ರಯಾಸ ಪಡುತ್ತಿರುವಾಗಲೇ ಸರಕಾರಿ ಕೊಳವೆ ಬಾವಿಯೊಂದು ನೀರಿದ್ದರೂ ಉಪಯೋಗಕ್ಕಿಲ್ಲದಂತಾಗಿದೆ.

ಪುತ್ತೂರು ತಾಲೂಕಿನ ಕಡಬ ಹೋಬಳಿಯ ಐತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮರ್ಧಾಳ ಸಮೀಪದ ಶಿವಾಜಿನಗರ ಎಂಬಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಕೊರೆದ ಕೊಳವೆ ಬಾವಿಯಲ್ಲಿ ಗರಿಷ್ಠ ಮಟ್ಟದಲ್ಲಿ ನೀರಿದ್ದರೂ ಪಂಪ್ ಹಾಕಲಾಗದ ಕಾರಣ ಉಪಯೋಗ ಮಾಡಲಾಗುತ್ತಿಲ್ಲ.

ಕಳೆದ ಲೋಕಸಭಾ ಚುನಾವಣೆಯ ಸಂದರ್ದಲ್ಲಿ ಮಾಜಿ ಜಿ.ಪಂ. ಸದಸ್ಯೆ ಕುಮಾರಿ ವಾಸುದೇವನ್ ತನ್ನ ಅನುದಾನದಲ್ಲಿ ಶಿವಾಜಿನಗರ ಪರಿಸರ ನಿವಾಸಿಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆಂದು ಕೊಳವೆ ಬಾವಿಯನ್ನು ಕೊರೆಸಿದ್ದರು. ಆ ಸಂದರ್ಭದಲ್ಲಿ ಪರಿಸರ ನಿವಾಸಿಗಳು ತಮ್ಮ ನೀರಿನ ಬವಣೆ ಮುಗಿಯಿತೆಂದು ಸಂಭ್ರಮಪಟ್ಟಿದ್ದರು. ಆದರೆ ಚುನಾವಣೆ ಮುಗಿದ ನಂತರ ಜನಪ್ರತಿನಿಧಿಗಳ್ಯಾರೂ ಕುಡಿಯುವ ನೀರಿನ ವಿಷಯದಲ್ಲಿ ಈ ಕಡೆ ಮುಖ ಮಾಡಿಲ್ಲ. ನಂತರ ನಡೆದ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳವರು ಆಶ್ವಾಸನೆ ನೀಡಿದ್ದಾರೆಯೇ ಹೊರತು ಪಂಪ್ ಹಾಕುವ ಗೋಜಿಗೆ ಹೋಗಿಲ್ಲ.

ಎಲ್ಲಾ ಸ್ಥಳಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಪಂಚಾಯತ್‌ನಿಂದ ಕೊಳವೆ ಬಾವಿ ಕೊರೆಸಿ ಪಂಪ್ ಹಾಕಿದ ನಂತರ ಗ್ರಾಮ ಪಂಚಾಯತ್‌ಗೆ ಹಸ್ತಾಂತರ ಮಾಡಲಾಗುತ್ತದೆ. ಆದರೆ ಶಿವಾಜಿನಗರದ ಕೊಳವೆ ಬಾವಿಗೆ ಪಂಪ್ ಹಾಕದ ಕಾರಣದಿಂದ ನಮಗೆ ಹಸ್ತಾಂತರಿಸಿಲ್ಲ.

ಸತೀಶ್ ಕೆ., ಅಧ್ಯಕ್ಷರು, ಐತ್ತೂರು ಗ್ರಾಮ ಪಂಚಾಯತ್

ತುರ್ತು ಕುಡಿಯುವ ನೀರಿನ ವ್ಯವಸ್ಥೆಗೆ ಸರಕಾರವು ಶಾಸಕರ ಮೂಲಕ 50 ಲಕ್ಷ ರೂ. ಕಾಯ್ದಿರಿಸಿದ್ದು, ಸುಳ್ಯ ಶಾಸಕರು ನಮ್ಮ ಬೇಡಿಕೆಗೆ ಸ್ಪಂದನೆ ನೀಡಿಲ್ಲ. ಜಿಲ್ಲಾ ಪಂಚಾಯತ್‌ನ ಅನುದಾನ ಬಂದ ಕೂಡಲೇ ಆದ್ಯತೆಯ ಮೇರೆಗೆ ಶಿವಾಜಿನಗರದಲ್ಲಿರುವ ಕೊಳವೆ ಬಾವಿಗೆ ಪಂಪ್ ಹಾಕಿಸಿ ಪರಿಸರ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲಾಗುವುದು.

ಪಿ.ಪಿ.ವರ್ಗೀಸ್, ಜಿ.ಪಂ. ಸದಸ್ಯರು, ಕಡಬ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News