ರಾಜಕೀಯ ಕುಮ್ಮಕ್ಕಿದೆಯೇ?
ಮಾನ್ಯರೆ,
ಮೊನ್ನೆಯಷ್ಟೇ ಪೊಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿಯಿಂದ ಮುಷ್ಕರದ ಬೆದರಿಕೆಗೆ ಮುಜುಗರಗೊಂಡಿದ್ದ ಪೊಲೀಸ್ ಇಲಾಖೆಗೆ ಇದೀಗ ಡಿವೈಎಸ್‌ಪಿ ಅನುಪಮಾ ಶೆಣೈ ಪ್ರಕರಣ ಮತ್ತಷ್ಟು ತಲೆನೋವು ತಂದಿರುವುದರಲ್ಲಿ ಸಂಶಯವಿಲ್ಲ. ಇತ್ತೀಚೆಗಿನ ಬೆಳವಣಿಗೆ ಗಮನಿಸುವಾಗ ಈ ಪ್ರಕರಣದಿಂದ ರಾಜ್ಯ ರಾಜಕಾರಣದಲ್ಲೂ ತಲ್ಲಣವೇಳುವ ಸೂಚನೆ ಕಾಣುತ್ತಿದೆ.
‘‘ಲಿಕ್ಕರ್ ಲಾಬಿಯ ದಬ್ಬಾಳಿಕೆಗೆ ಬೇಸತ್ತು ರಾಜೀನಾಮೆ ನೀಡಿದ್ದೇನೆ’’ ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ಅಸಮಾಧಾನ ಹೊರಹಾಕಿದ ಕೂಡ್ಲಿಗಿ ಉಪವಿಭಾಗದ ಡಿವೈಎಸ್‌ಪಿ ಅನುಪಮಾ ಶೆಣೈ ಇದೀಗ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಕಾರ್ಮಿಕ ಸಚಿವ ಪರಮೇಶ್ವರ ನಾಯ್ಕಾ ಮೇಲೆ ಫೇಸ್‌ಬುಕ್ ಸಮರ ಆರಂಭಿಸಿದ್ದಾರೆ.
ಸಚಿವರು ಮತ್ತು ಪೊಲೀಸ್ ಅಧಿಕಾರಿಯೊಬ್ಬರ ಕದನ ಮುಂದಿನ ದಿನಗಳಲ್ಲಿ ವಿಪರೀತ ಘಟ್ಟಕ್ಕೆ ತಲುಪಬಹುದೆಂದು ಊಹಿಸಿದ ಗೃಹ ಇಲಾಖೆ ಅನುಪಮಾ ಶೆಣೈಯವರ ಮನವೊಲಿಕೆಗೆ ಮುಂದಾಗಿದೆಯಂತೆ.
ರಾಜೀನಾಮೆ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ರಾಜಕೀಯ ಕುಮ್ಮಕ್ಕಿನ ಬಗ್ಗೆಯೂ ಗುಮಾನಿ ಬರುತ್ತಿದೆ. ಹಾಗಾಗಿ ಸಚಿವರು ಮತ್ತು ಪೊಲೀಸ್ ಜಟಾಪಟಿ ತನಗೆ ದೊಡ್ಡ ತಲೆನೋವಾಗುವ ಮುನ್ನ ಸರಕಾರ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆದು ಪ್ರಕರಣಕ್ಕೆ ತೆರೆ ಎಳೆಯಬೇಕಾಗಿದೆ.