×
Ad

ಎಂಟಿಸಿಆರ್ ಗುಂಪಿಗೆ ಸೇರ್ಪಡೆಗೊಂಡ ಭಾರತ

Update: 2016-06-08 22:56 IST

 ವಾಶಿಂಗ್ಟನ್, ಜೂ. 8: ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್- ಎಂಟಿಸಿಆರ್)ಗೆ ಸೇರಿಸಿಕೊಳ್ಳಲು ಅದರ ಸದಸ್ಯರು ಒಪ್ಪುವುದರೊಂದಿಗೆ, ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಜೊತೆಗಿನ ಪ್ರಧಾನಿ ನರೇಂದ್ರ ಮೋದಿಯ ಸಭೆ ಮಂಗಳವಾರ ಉತ್ತಮ ನಿರೀಕ್ಷೆಗಳೊಂದಿಗೆ ಆರಂಭಗೊಂಡಿತು.

34 ಸದಸ್ಯರ ಗುಂಪಿಗೆ ಭಾರತದ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಲು ಸದಸ್ಯರಿಗೆ ಸೋಮವಾರ ಅಂತಿಮ ದಿನವಾಗಿತ್ತು. ಈ ಅವಧಿಯಲ್ಲಿ ಯಾರೂ ಆಕ್ಷೇಪ ಎತ್ತಿಲ್ಲ. ಅಮೆರಿಕದ ಬಲವಾದ ಬೆಂಬಲ ಗುಂಪಿಗೆ ಭಾರತದ ಪ್ರವೇಶವನ್ನು ಖಾತರಿಪಡಿಸಿತು. ಅದೇ ವೇಳೆ, ಭಾರತಕ್ಕೆ ಯಾವಾಗಲೂ ಅಡ್ಡಗಾಲು ಹಾಕುವ ಚೀನಾ ಈ ಗುಂಪಿನ ಸದಸ್ಯನಾಗಿಲ್ಲ.
ಈ ಗುಂಪು ಕ್ಷಿಪಣಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ವ್ಯಾಪಾರವನ್ನು ನಿಯಂತ್ರಿಸುತ್ತದೆ.
ಈ ಉನ್ನತ ಗುಂಪಿನ ಸದಸ್ಯನಾದ ಬಳಿಕ ಭಾರತ ವಿಶ್ವದ ಯಾವುದೇ ಭಾಗದಿಂದ ಸುಧಾರಿತ ಕ್ಷಿಪಣಿ ತಂತ್ರಜ್ಞಾನವನ್ನು ಪಡೆಯಬಹುದಾಗಿದೆ ಹಾಗೂ ಅತ್ಯುನ್ನತ ದರ್ಜೆಯ ಕ್ಷಿಪಣಿಗಳನ್ನು ಖರೀದಿಸಬಹುದಾಗಿದೆ. ಅದೇ ವೇಳೆ, ತನ್ನ ಸೂಪರ್‌ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡಬಹುದಾಗಿದೆ. ಈ ಮಾದರಿಯ ಕ್ಷಿಪಣಿಗಳನ್ನು ಭಾರತ ರಶ್ಯದ ಜೊತೆಗೆ ಜಂಟಿಯಾಗಿ ಅಭಿವೃದ್ಧಿಪಡಿಸಿತ್ತು.
‘‘ನನ್ನ ಆತ್ಮೀಯ ಮಿತ್ರ ಒಬಾಮರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾವು ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ನನ್ನನ್ನು ಆಹ್ವಾನಿಸಿರುವುದಕ್ಕಾಗಿ ನಾನು ಅಮೆರಿಕದ ಕಾಂಗ್ರೆಸ್‌ಗೂ ಧನ್ಯವಾದ ಸಲ್ಲಿಸುತ್ತೇನೆ’’ ಎಂದು ಶ್ವೇತಭವನದಲ್ಲಿ ಭೋಜನದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ ಹೇಳಿದರು.
ಎಂಟಿಸಿಆರ್ ಮತ್ತು ಇತರ ಮೂರು ರಫ್ತು ನಿಯಂತ್ರಣ ವ್ಯವಸ್ಥೆಗಳಾದ ಆಸ್ಟ್ರೇಲಿಯ ಗ್ರೂಪ್, ಪರಮಾಣು ಪೂರೈಕೆದಾರರ ಗುಂಪು ಮತ್ತು ವಸೆನಾರ್ ಅರೇಂಜ್‌ಮೆಂಟ್‌ಗಳಿಗೆ ಭಾರತದ ಸೇರ್ಪಡೆಯನ್ನು ಅಮೆರಿಕದ ಒಬಾಮ ಆಡಳಿತ ಬಲವಾಗಿ ಬೆಂಬಲಿಸಿದೆ.
 ಇಟಲಿ ಈ ಮೊದಲು ಎಂಟಿಸಿಆರ್‌ಗೆ ಭಾರತದ ಸೇರ್ಪಡೆಯನ್ನು ವಿರೋಧಿಸಿತ್ತು. ಭಾರತದಲ್ಲಿ ಜೈಲಿನಲ್ಲಿರುವ ಇಟಲಿಯ ನೌಕಾಪಡೆ ಅಧಿಕಾರಿಯೊಬ್ಬರನ್ನು ತವರಿಗೆ ಕಳುಹಿಸಿಕೊಡದ ಭಾರತದ ಬಗ್ಗೆ ಇಟಲಿ ಮುನಿಸಿಕೊಂಡಿತ್ತು.
ಆದರೆ, ಈಗ ಸಾಲ್ವಟೋರ್ ಗಿರೋನ್ ಇಟಲಿಗೆ ವಾಪಸಾಗಿದ್ದು, ಸಮಸ್ಯೆ ಇತ್ಯರ್ಥಗೊಂಡಿದೆ. ಹಾಗಾಗಿ, ಇಟಲಿ ಆಕ್ಷೇಪ ಸಲ್ಲಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News