ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಇತಿಹಾಸ ಸೃಷ್ಟಿಸಿದ ಹಿಲರಿ
ಲಾಸ್ ಏಂಜೆಲೀಸ್, ಜೂ.8: ಬುಧವಾರ ನ್ಯೂಜೆರ್ಸಿ,ನ್ಯೂ ಮೆಕ್ಸಿಕೋ ಮತ್ತು ಸೌಥ್ ಡಕೋಟಾ ಪ್ರಾಥಮಿಕ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ ಹಿಲರಿ ಕ್ಲಿಂಟನ್ ಅವರು ಅಧ್ಯಕ್ಷೀಯ ಹುದ್ದೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಅಮೆರಿಕದಲ್ಲಿ ಅಧ್ಯಕ್ಷೀಯ ಹುದ್ದೆಗೆ ಮೊದಲ ಮಹಿಳಾ ಅಭ್ಯರ್ಥಿಯೆಂಬ ಹೆಗ್ಗಳಿಕೆಯೊಂದಿಗೆ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಲು ಅಗತ್ಯವಿದ್ದ 2,383 ಪ್ರತಿನಿಧಿಗಳ ಬೆಂಬಲವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಕ್ಕಾಗಿ ಹಿಲರಿ(68)ಯವರನ್ನು ಅಧ್ಯಕ್ಷ ಬರಾಕ್ ಒಬಾಮಾ ಅವರು ಅಭಿನಂದಿಸಿದ್ದಾರೆ.
ಆದರೆ ಅಧ್ಯಕ್ಷೀಯ ಹುದ್ದೆಗೆ ಡೆಮಾಕ್ರಟಿಕ್ ಅಭ್ಯರ್ಥಿಯಾಗಲು ಬಯಸಿ ಹಿಲರಿಯವರಿಗೆ ತೀವ್ರ ಪೈಪೋಟಿ ನೀಡಿದ್ದ ಬರ್ನೀ ಸ್ಯಾಂಡರ್ಸ್(74) ಸ್ಪರ್ಧೆಯಿಂದ ಹೊರಬೀಳಲು ಸಿದ್ಧರಿಲ್ಲ.
ಮುಂದಿನ ಮಂಗಳವಾರ ನಾವು ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ವಾಷಿಂಗ್ಟನ್ ಡಿಸಿಯಲ್ಲಿ ಪ್ರಾಥಮಿಕ ಚುನಾವಣೆ ಗೆಲ್ಲಲು ಕಠಿಣವಾಗಿ ಶ್ರಮಿಸುತ್ತೇವೆ. ಬಳಿಕ ಸಾಮಾಜಿಕ,ಆರ್ಥಿಕ,ಜನಾಂಗೀಯ ಮತ್ತು ಪಾರಿಸರಿಕ ನ್ಯಾಯಕ್ಕಾಗಿ ನಮ್ಮ ಹೋರಾಟವನ್ನು ಫಿಲಡೆಲ್ಫಿಯಾಕ್ಕೆ ಒಯ್ಯಲಿದ್ದೇವೆ ಎಂದು ಸಾಂತಾ ಮೊನಿಕಾದಲ್ಲಿ ಭಾರೀ ಸಂಖ್ಯೆಯಲ್ಲಿದ್ದ ತನ್ನ ಬೆಂಬಲಿಗರನ್ನುದ್ದೇಶಿಸಿ ಅವರು ಹೇಳಿದರು.
ಇದೀಗ 2,497 ಪ್ರತಿನಿಧಿಗಳ ಬೆಂಬಲ ಹಿಲರಿ ಬುಟ್ಟಿಯಲ್ಲಿದ್ದರೆ ಸ್ಯಾಂಡರ್ಸ್ 1,663 ಪ್ರತಿನಿಧಿಗಳ ಬೆಂಬಲವನ್ನು ಹೊಂದಿದ್ದಾರೆ.
ತನ್ಮಧ್ಯೆ,ಡೆಮಾಕ್ರಟಿಕ್ ಪಕ್ಷದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳಲು ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಸ್ಯಾಂಡರ್ಸ್ ಮೇಲೆ ಒತ್ತಡ ಹೆಚ್ಚುತ್ತಿದೆ.