ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ಶರಪೋವಾಗೆ ಎರಡು ವರ್ಷ ನಿಷೇಧ
ಲಂಡನ್, ಜೂ.8: ಆಸ್ಟ್ರೇಲಿಯನ್ ಓಪನ್‌ನಲ್ಲಿ ನಿಷೇಧಿತ ದ್ರವ್ಯ ಮೆಲ್ಡೋನಿಯಮ್ ಸೇವಿಸಿ ಉದ್ದೀಪನಾ ದ್ರವ್ಯ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ರಶ್ಯದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾಗೆ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್(ಐಟಿಎಫ್)ಎರಡು ವರ್ಷಗಳ ಕಾಲ ನಿಷೇಧ ಹೇರಿದೆ.
29ರ ಹರೆಯದ ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಶರಪೋವಾ ವಿರುದ್ಧದ ನಿಷೇಧ ಅವಧಿ ಈ ವರ್ಷದ ಜ.26ರಿಂದ ಅನ್ವಯವಾಗಲಿದ್ದು, ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿರುವ ಸಾಧನೆಯನ್ನು ಅನರ್ಹಗೊಳಿಸಲಾಗಿದೆ ಎಂದು ಐಟಿಎಫ್ ಪ್ರಕಟನೆಯೊಂದರಲ್ಲಿ ಬುಧವಾರ ತಿಳಿಸಿದೆ.
2016ರ ಟೆನಿಸ್ ಡೋಪಿಂಗ್ ವಿರೋಧಿ ಕಾರ್ಯಕ್ರಮದ ಆರ್ಟಿಕಲ್ 8.1ರಡಿ ನೇಮಿಸಲ್ಪಟ್ಟ ಸ್ವತಂತ್ರ ಸಮಿತಿಯು ಶರಪೋವಾ ಉದ್ದೀಪನಾ ದ್ರವ್ಯ ಸೇವನೆಗೆ ಸಂಬಂಧಿಸಿದ ನಿಯಮ ಉಲ್ಲಂಘಿಸಿದೆ ಎಂದು ಬೆಟ್ಟು ಮಾಡಿದೆ. ಈ ಹಿನ್ನೆಲೆಯಲ್ಲಿ ಶರಪೋವಾಗೆ ಜ.26,2016ರಿಂದ ಜಾರಿಗೆ ಬರುವಂತೆ ಇನ್ನು 2 ವರ್ಷಗಳ ಕಾಲ ಟೆನಿಸ್‌ನಿಂದ ನಿಷೇಧ ವಿಧಿಸಲಾಗಿದೆ ಎಂದು ಐಟಿಎಫ್ ಹೇಳಿದೆ.
ಶರಪೋವಾಗೆ ಅಮಾನತು ಶಿಕ್ಷೆಯ ವಿರುದ್ಧ ಸ್ವಿಸ್‌ನ ಕ್ರೀಡಾ ಪಂಚಾಯತಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.
ಜನವರಿಯಲ್ಲಿ ನಡೆದ ಡೋಪಿಂಗ್ ಟೆಸ್ಟ್‌ನಲ್ಲಿ ತಾನು ಅನುತ್ತೀರ್ಣರಾಗಿದ್ದೇನೆ ಎಂದು ಲಾಸ್ ಏಂಜಲೀಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಶರಪೋವಾ ಸ್ವತಹ ಬಹಿರಂಗಪಡಿಸಿದ್ದರು. ಶರಪೋವಾ ತಪ್ಪೊಪ್ಪಿಕೊಂಡ ಬಳಿಕ ಮಾರ್ಚ್‌ನಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಫೆಡರೇಶನ್(ಐಟಿಎಫ್) ಶರಪೋವಾರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು.
2016ರ ಜನವರಿ ನಂತರ ವಿಶ್ವ ಉದ್ದೀಪನಾ ತಡೆ ಘಟಕ(ವಾಡಾ) ತಾನು ಸೇವಿಸುತ್ತಿರುವ ಮೆಲ್ಡ್ಬೋನಿಯಂ ದ್ರವ್ಯವನ್ನು ನಿಷೇಧದ ಪಟ್ಟಿಗೆ ಸೇರಿಸಿರುವ ವಿಷಯ ತನಗೆ ಗೊತ್ತಿರಲಿಲ್ಲ ಎಂದು ಶರಪೋವಾ ಬಳಿಕ ಸ್ಪಷ್ಟಪಡಿಸಿದ್ದರು.
ನಿಷೇಧಕ್ಕೆ ಗುರಿಯಾಗಿರುವ ಶರಪೋವಾ ಈ ವರ್ಷದ ವಿಂಬಲ್ಡನ್ ಚಾಂಪಿಯನ್‌ಶಿಪ್ ಹಾಗೂ ರಿಯೋ ಒಲಿಂಪಿಕ್ಸ್‌ನಿಂದ ವಂಚಿತರಾಗಿದ್ದಾರೆ. ಶರಪೋವಾ 35 ಡಬ್ಲುಟಿಎ ಸಿಂಗಲ್ಸ್ ಪ್ರಶಸಿಗಳನ್ನು ಜಯಿಸಿದ್ದು, ಕ್ರೀಡೆಯ ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.