ಜೂ.11ರಂದು ರಾ.ಹೆ. ಭೂಸ್ವಾಧೀನತೆ ಪರಿಹಾರಕ್ಕಾಗಿ ವಿಶೇಷ ಅದಾಲತ್: ಡಿಸಿ

Update: 2016-06-09 07:35 GMT

ಮಂಗಳೂರು, ಜೂ.9: ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಗೆ ಭೂಸ್ವಾಧೀನಗೊಳಿಸಲಾದ ಪ್ರಕರಣಗಳಲ್ಲಿ ಪರಿಹಾರ ಪಡೆಯಲು ಬಾಕಿ ಇರುವವರಿಗೆ ಅನುಕೂಲವಾಗುವಂತೆ ಜೂ. 11ರಂದು ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ವಿಶೇಷ ಅದಾಲತನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಂತೂರಿನಿಂದ ತಲಪಾಡಿ ಮತ್ತು ಸುರತ್ಕಲ್‌ನಿಂದ ಮುಲ್ಕಿ ವರೆಗಿನ ಒಟ್ಟು 17 ಗ್ರಾಮಗಳಲ್ಲಿ ರಾಷ್ಟೀಯ ಹೆದ್ದಾರಿಗೆ ಭೂಸ್ವಾಧೀನಗೊಂಡು ಪರಿಹಾರ ಪಡೆಯದವರ ಪೈಕಿ 376 ಮಂದಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಲ್ಲಿ ಕಳೆದ ಎರಡು ವರ್ಷಗಳಲ್ಲಿ 296 ಪ್ರಕರಣಗಳಲ್ಲಿ ಪರಿಹಾರ ಹೆಚ್ಚಿಸಿ ಆದೇಶ ನೀಡಲಾಗಿದೆ. ಅದರಲ್ಲಿ ಈವರೆಗೆ 87 ಪ್ರಕರಣಗಳಲ್ಲಿ ಹೆಚ್ಚುವರಿ ಮೊತ್ತವನ್ನು ಅರ್ಜಿದಾರರು ಪಡೆದುಕೊಂಡಿದ್ದು, ಅನುಮೋದನೆಗೊಂಡ 154 ಪ್ರಕರಣಗಳ ಪೈಕಿ 67 ಪ್ರಕರಣಗಳಲ್ಲಿ ಪರಿಹಾರ ಪಡೆದುಕೊಂಡಿಲ್ಲ ಎಂದು ಹೇಳಿದರು.

ಹೆಚ್ಚುವರಿ ಪರಿಹಾರಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಆದೇಶದಲ್ಲೂ ತೃಪ್ತರಾಗದಿದ್ದಲ್ಲಿ ಭೂಮಾಲಕರು ಮತ್ತೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಹಾಗಿದ್ದರೂ ಈಗಾಗಲೇ ಆದೇಶವಾಗಿರುವ ಬಾಕಿ ಪರಿಹಾರ ಮೊತ್ತವನ್ನು ಅವರು ಪಡೆದುಕೊಳ್ಳಬಹುದು. ಅದಕ್ಕಾಗಿ ಈ ವಿಶೇಷ ಅದಾಲತ್ ಆಯೋಜಿಸಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ ಮತ್ತು ಭೂಸ್ವಾಧೀನತೆ ಕಚೇರಿಯ ಅಧಿಕಾರಿಗಳು ಪ್ರತಿ ಗ್ರಾಮದಲ್ಲಿ ಪರಿಹಾರ ಪಾವತಿಯ ಕೋರಿಕೆ ದಾಖಲೆಗಳನ್ನು ಸಂಗ್ರಹಿಸಲು ಗ್ರಾಮವಾರು ಭೇಟಿ ನೀಡುತ್ತಿದ್ದು, ಭೂಮಾಲಕರು ಇದರ ಪ್ರಯೋಜನ ಪಡೆಯಲು ಸಂಬಧಪಟ್ಟ ದಾಖಲೆಗಳೊಂದಿಗೆ ಅದಾಲತ್‌ನಲ್ಲಿ ಭಾಗವಹಿಸಿ ಅದೇ ದಿನ ಪರಿಹಾರ ಪಾವತಿಸಲು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಒಟ್ಟು 17 ಗ್ರಾಮಗಳಲ್ಲಿ 56.72 ಹೆಕ್ಟೇರ್ ಭೂಸ್ವಾಧೀನಗೊಂಡಿದ್ದು, ಅದರಲ್ಲಿ ಕೇವಲ 34.51 ಹೆಕ್ಟೇರ್‌ಗೆ ಮಾತ್ರ ಪರಿಹಾರ ಪಾವತಿಸಲಾಗಿದೆ. ಉಳಿದ 22.21 ಹೆಕ್ಟೇರ್ ಜಮೀನಿಗೆ ಅಂದಾಜು 900 ಖಾತೆದಾರರಿಗೆ 53.62 ಕೋಟಿ ರೂ. ಪರಿಹಾರ ಪಾವತಿಸಲು ಬಾಕಿ ಇದೆ. ವಿಶೇಷ ಅದಾಲತ್‌ನಲ್ಲಿ ಈ ಬಗ್ಗೆಯೇ ಕ್ಲೇಮ್ ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬಹುದು. ಸಂಬಂಧಪಟ್ಟ ಭೂಮಾಲಕರು ಅರ್ಹ ದಾಖಲೆಗಳೊಂದಿಗೆ ಅದಾಲತ್‌ನಲ್ಲಿ ಭಾಗವಹಿಸಬಹುದು. ಈ ಬಗ್ಗೆ ಎಲ್ಲರಿಗೂ ಪ್ರತ್ಯೇಕವಾಗಿ ನೋಟೀಸನ್ನು ಗ್ರಾಮಕರಣಿಕರ ಮೂಲಕ ನೀಡಲಾಗುವುದು. ನೋಟೀಸು ಸಿಗದೇ ಇದ್ದಲ್ಲಿ ಖಾತೆದಾರರು ಅದಾಲತ್‌ನಂದು ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಪರಿಹಾರ ಪಾವತಿಸಲು ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ, ಸಹಾಯಕ ಆಯುಕ್ತ ಡಾ. ಅಶೋಕ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News