×
Ad

ಸೊಮಾಲಿಯ: ಇಥಿಯೋಪಿಯ ಸೇನಾ ನೆಲೆಯ ಮೇಲೆ ಉಗ್ರ ದಾಳಿ - 43 ಸೈನಿಕರ ಸಾವು?

Update: 2016-06-09 20:28 IST

ಮೊಗಾದಿಶು, ಜೂ. 9: ಶಬಾಬ್ ಬಂಡುಕೋರರು ಮಧ್ಯ ಸೊಮಾಲಿಯದಲ್ಲಿರುವ ಇಥಿಯೋಪಿಯದ ಸೇನಾ ನೆಲೆಯೊಂದರ ಮೇಲೆ ಗುರುವಾರ ಮುಂಜಾನೆ ದಾಳಿ ನಡೆಸಿದ್ದಾರೆ. ಸೊಮಾಲಿಯದಲ್ಲಿರುವ ಆಫ್ರಿಕನ್ ಒಕ್ಕೂಟದ ಸೈನಿಕರ ಮೇಲೆ ದಾಳಿ ನಡೆಸುವ ತಮ್ಮ ಯೋಜನೆಯ ಭಾಗವಾಗಿ ಬಂಡುಕೋರರು ಈ ದಾಳಿಯನ್ನು ನಡೆಸಿದ್ದಾರೆ.

ಅಲ್-ಖಾಯಿದ ಜೊತೆ ನಂಟು ಹೊಂದಿರುವ ಬಂಡುಕೋರರು ಹಿರನ್ ವಲಯದ ಹಲ್ಗನ್‌ನಲ್ಲಿರುವ ನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಇದನ್ನು ಬಂಡುಕೋರ ಗುಂಪು ‘ಟೆಲಿಗ್ರಾಂ’ ಮೆಸೇಜಿಂಗ್ ಚಾನೆಲ್‌ನಲ್ಲಿ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತನ್ನ ಹೋರಾಟಗಾರರು ಕನಿಷ್ಠ 43 ಇಥಿಯೋಪಿಯ ಸೈನಿಕರನ್ನು ಕೊಂದಿದ್ದಾರೆ ಎಂದು ಅದು ಹೇಳಿಕೊಂಡಿದೆ. ಆದರೆ, ಸ್ವತಂತ್ರವಾಗಿ ಇದು ದೃಢಪಟ್ಟಿಲ್ಲ.

ಆರಂಭದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬ ತನ್ನ ವಾಹನವನ್ನು ಸ್ಫೋಟಿಸಿದನು. ಬಳಿಕ ಬಂದೂಕುಧಾರಿಗಳು ನೆಲೆಯೊಳಗೆ ಗುಂಡು ಹಾರಿಸುತ್ತಾ ಪ್ರವೇಶಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಈ ಮಾದರಿಯ ದಾಳಿಯನ್ನು ಶಬಾಬ್ ಬಂಡುಕೋರರು ಒಂದು ವರ್ಷದಿಂದ ನಡೆಸುತ್ತಾ ಬಂದಿದ್ದಾರೆ. ಕಳೆದ ವರ್ಷದ ಜೂನ್‌ನಲ್ಲಿ ಲೆಗೊದಲ್ಲಿರುವ ಬುರುಂಡಿ ಸೈನಿಕರ ನೆಲೆ, ಸೆಪ್ಟಂಬರ್‌ನಲ್ಲಿ ಜನಲೆಯಲ್ಲಿರುವ ಉಗಾಂಡ ಸೈನಿಕರ ನೆಲೆ ಮತ್ತು ಜನವರಿಯಲ್ಲಿ ಅಲ್ ಅದ್ದೆಯಲ್ಲಿರುವ ಕೆನ್ಯದ ಸೈನಿಕರ ನೆಲೆಗಳ ಮೇಲೆ ಭಯೋತ್ಪಾದಕರು ಇದೇ ಮಾದರಿಯಲ್ಲಿ ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News