31 ಕೋಟಿ ಟ್ವಿಟರ್ ಪಾಸ್‌ವರ್ಡ್‌ಗಳ ಸೋರಿಕೆ?
ಸ್ಯಾನ್ ಫ್ರಾನ್ಸಿಸ್ಕೊ, ಜೂ. 9: ಅಗಾಧ ಸಂಖ್ಯೆ ಟ್ವಿಟರ್ ಬಳಕೆದಾರರ ವಿವರಗಳನ್ನು ತಾನು ಪಡೆದುಕೊಂಡಿರುವುದಾಗಿ ಓರ್ವ ಕನ್ನಗಾರ ಹೇಳಿಕೊಂಡಿದ್ದಾನೆ ಹಾಗೂ ತಾನು ಅವುಗಳನ್ನು 10 ಬಿಟ್‌ಕಾಯಿನ್‌ಗಳಿಗೆ ಮಾರಾಟ ಮಾಡುವುದಾಗಿ ಹೇಳಿದ್ದಾನೆ.
37.9 ಕೋಟಿಗೂ ಅಧಿಕ ಟ್ವಿಟರ್ ಖಾತೆಗಳ ಪಾಸ್‌ವರ್ಡ್ ಸೇರಿದಂತೆ ಎಲ್ಲ ವಿವರಗಳು ತನ್ನ ಬಳಿಯಿವೆ ಎಂದು ‘ಟೆಸಾ88’ ಎಂಬುದಾಗಿ ಗುರುತಿಸಿಕೊಂಡಿರುವ ಕನ್ನಗಾರ ಹೇಳಿಕೊಂಡಿದ್ದಾನೆ.
ಆದರೆ, ಇದು ಟ್ವಿಟರ್‌ನ ಅಧಿಕೃತ ಸಕ್ರಿಯ ಬಳಕೆದಾರರ ಸಂಖ್ಯೆ 3.1 ಕೋಟಿಗಿಂತಲೂ ಅಧಿಕವಾಗಿದೆ. ಹಾಗಾಗಿ, ಬಳಕೆಯಲ್ಲಿಲ್ಲದ ಹಾಗೂ ನಿಷ್ಕ್ರಿಯ ಟ್ವಿಟರ್ ಖಾತೆಗಳನ್ನೂ ಹ್ಯಾಕರ್ ಗಣನಗೆ ತೆಗೆದುಕೊಂಡಿರಬಹುದು ಎಂದು ಭಾವಿಸಲಾಗಿದೆ.
ಕನ್ನಕ್ಕೊಳಗಾದ ಖಾತೆಗಳ ಯೂಸರ್‌ನೇಮ್‌ಗಳು, ಇಮೇಲ್ ವಿಳಾಸಗಳು ಮತ್ತು ಪಾಸ್‌ವರ್ಡ್‌ಗಳನ್ನು ಮಾರಾಟಕ್ಕಿಡಲಾಗಿದೆ ಎನ್ನಲಾಗಿದೆ.
ಆದರೆ, ಈ ವಿವರಗಳನ್ನು ಟ್ವಿಟರ್ ವ್ಯವಸ್ಥೆಯಿಂದ ಪಡೆದಿರುವ ಸಾಧ್ಯತೆಯಿಲ್ಲ, ಮಾಲ್‌ವೇರ್‌ಗಳನ್ನು ಬಳಸಿ ಬಳಕೆದಾರರ ಬ್ರೌಸರ್‌ಗಳಿಂದಲೇ ಪಡೆದಿರಬಹುದಾದ ಸಾಧ್ಯತೆಯಿದೆ ಎಂದು ಸೆಕ್ಯುರಿಟಿ ಸಂಸ್ಥೆ ‘ಲೀಕ್ಡ್ ಸೋರ್ಸ್’ ಹೇಳಿದೆ.
ಈ ವರದಿಗಳಿಗೆ ಪ್ರತಿಕ್ರಿಯಿಸಿರುವ ಟ್ವಿಟರ್‌ನ ವಕ್ತಾರರೊಬ್ಬರು, ಈ ಮಾಹಿತಿಗಳನ್ನು ಟ್ವಿಟರ್ ವ್ಯವಸ್ಥೆಯಿಂದ ಪಡೆಯಲಾಗಿಲ್ಲ ಎಂಬ ಬಗ್ಗೆ ವಿಶ್ವಾಸವಿದೆ ಎಂದಿದ್ದಾರೆ.