×
Ad

ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಮೆಕ್ಸಿಕೊ ಬೆಂಬಲ

Update: 2016-06-09 22:40 IST
ಮೆಕ್ಸಿಕೊ ಸಿಟಿಯ ರೆಸ್ಟೋರೆಂಟೊಂದರಲ್ಲಿ ಬುಧವಾರ ರಾತ್ರಿ ಜೊತೆಗೆ ಊಟ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮೆಕ್ಸಿಕೊ ಅಧ್ಯಕ್ಷ ಎನ್ರಿಕ್ ಪೆನ ನೀಟೊ.

ಮೆಕ್ಸಿಕೊ ಸಿಟಿ, ಜೂ. 9: ಸುಧಾರಿತ ಪರಮಾಣು ತಂತ್ರಜ್ಞಾನಗಳ ವ್ಯಾಪಾರವನ್ನು ನಿಯಂತ್ರಿಸುವ 48 ದೇಶಗಳ ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ನ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಗಳಿಗೆ ಮೆಕ್ಸಿಕೊ ಬೆಂಬಲ ನೀಡಿದೆ.
ಈಗಾಗಲೇ ಸ್ವಿಝರ್‌ಲ್ಯಾಂಡ್ ಈ ವಿಷಯದಲ್ಲಿ ಭಾರತಕ್ಕೆ ಬೆಂಬಲ ನೀಡಿರುವುದನ್ನು ಸ್ಮರಿಸಬಹುದಾಗಿದೆ.
‘‘ಪರಮಾಣು ಪೂರೈಕೆದಾರರ ಗುಂಪಿಗೆ ಪ್ರವೇಶ ಗಳಿಸುವ ಭಾರತದ ಪ್ರಯತ್ನಗಳನ್ನು ಮೆಕ್ಸಿಕೊ ಬೆಂಬಲಿಸುತ್ತದೆ. ಒಂದು ದೇಶವಾಗಿ ನಾವು ಧನಾತ್ಮಕ ಹಾಗೂ ರಚನಾತ್ಮಕ ಬೆಂಬಲವನ್ನು ಭಾರತಕ್ಕೆ ಘೋಷಿಸುತ್ತೇವೆ’’ ಎಂದು ಮೆಕ್ಸಿಕೊದ ಅಧ್ಯಕ್ಷ ಎನ್ರಿಕ್ ಪೆನ ನೀಟೊ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯನ್ನು ಇಂದು ತನ್ನ ಲಾಸ್ ಪಿನೋಸ್ ನಿವಾಸದಲ್ಲಿ ಭೇಟಿಯಾದ ಬಳಿಕ ಅವರು ಈ ಭರವಸೆಯನ್ನು ನೀಡಿದರು.
ಪರಮಾಣು ನಿಶ್ಶಸ್ತ್ರೀಕರಣ ಮತ್ತು ಪ್ರಸರಣ ನಿಷೇಧ ಕಾರ್ಯಸೂಚಿಗೆ ಪ್ರಧಾನಿ ಮೋದಿ ಬದ್ಧತೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಭಾರತದ ಸದಸ್ಯತ್ವವನ್ನು ಮೆಕ್ಸಿಕೊ ಬೆಂಬಲಿಸುತ್ತದೆ ಎಂದರು.
‘‘ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಅಧ್ಯಕ್ಷ ಪೆನ ನೀಟೊ ನೀಡಿರುವ ಧನಾತ್ಮಕ ಹಾಗೂ ರಚನಾತ್ಮಕ ಬೆಂಬಲಕ್ಕೆ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ’’ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಮೆಕ್ಸಿಕೊ ಬೆಂಬಲ ನೀಡಿರುವುದು ಆ ದೇಶದ ಧೋರಣೆಯಲ್ಲಾಗಿರುವ ಐತಿಹಾಸಿಕ ಬದಲಾವಣೆಯನ್ನು ಸೂಚಿಸಿದೆ. ಅದು ದಶಕಗಳ ಕಾಲ ಪರಮಾಣು ನಿಶ್ಶಸ್ತ್ರೀಕರಣ ಮತ್ತು ಪ್ರಸರಣ ನಿಷೇಧದ ಪರವಾಗಿ ದೃಢ ನಿಲುವು ತಾಳಿರುವುದನ್ನು ಸ್ಮರಿಸಬಹುದಾಗಿದೆ. ಸ್ವಿಝರ್‌ಲ್ಯಾಂಡ್ ಈ ವಾರದ ಆದಿ ಭಾಗದಲ್ಲಿ ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲ ನೀಡಿರುವುದನ್ನು ಸ್ಮರಿಸಬಹುದಾಗಿದೆ. ಉನ್ನತ ಪರಮಾಣು ಕ್ಲಬ್‌ಗೆ ಭಾರತದ ಪ್ರವೇಶಕ್ಕೆ ಬೆಂಬಲ ಕ್ರೋಡೀಕರಿಸುವುದಕ್ಕಾಗಿ ಈ ದೇಶಗಳ ಬೆಂಬಲ ಕೋರಲು ಪ್ರಧಾನಿ ಮೋದಿ ತನ್ನ ಪ್ರವಾಸ ಪಟ್ಟಿಯಲ್ಲಿ ಈ ಎರಡು ದೇಶಗಳನ್ನು ಸೇರಿಸಿಕೊಂಡಿದ್ದರು.

ಮೋದಿಯನ್ನು ರೆಸ್ಟೋರೆಂಟಿಗೆ ಕರೆದೊಯ್ದ ಮೆಕ್ಸಿಕೊ ಅಧ್ಯಕ್ಷ

ಪ್ರಧಾನಿ ನರೇಂದ್ರ ಮೋದಿ ಇಂದು ಮೆಕ್ಸಿಕೊದಲ್ಲಿ ಯಶಸ್ವಿ ದಿನವೊಂದನ್ನು ಕಳೆದರು. ಮೆಕ್ಸಿಕೊ ಸಿಟಿಯಲ್ಲಿ ಮೊದಲು ಅವರಿಗೆ ಭಾರತೀಯ ಸಮುದಾಯದ ಸದಸ್ಯರು ಭವ್ಯ ಸ್ವಾಗತ ನೀಡಿದರು. ಬಳಿಕ ಅಧ್ಯಕ್ಷ ಪೆನ ನೀಟೊ ಅವರಿಂದ ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ‘‘ಧನಾತ್ಮಕ ಮತ್ತು ರಚನಾತ್ಮಕ’’ ಬೆಂಬಲ ದೊರಕಿತು. ಇವೆಲ್ಲವುಗಳನ್ನು ಮೀರಿ, ಸ್ವತಃ ಮೆಕ್ಸಿಕೊ ಅಧ್ಯಕ್ಷರು ಮೋದಿಯನ್ನು ತನ್ನ ಕಾರ್‌ನಲ್ಲಿ ಕ್ವಿಂಟಾನಿಲ್‌ನಲ್ಲಿರುವ ಸಸ್ಯಾಹಾರ ರೆಸ್ಟೋರೆಂಟೊಂದಕ್ಕೆ ಕರೆದೊಯ್ದರು. ಈ ರೆಸ್ಟೋರೆಂಟ್ ಜಗತ್ತಿನ ಅತ್ಯಂತ ಶ್ರೇಷ್ಠ 50 ರೆಸ್ಟೋರೆಂಟ್‌ಗಳ ಪೈಕಿ ಒಂದಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ 1986ರಲ್ಲಿ ಅಧಿಕೃತ ಭೇಟಿ ನೀಡಿದ ಬಳಿಕ, ಆ ದೇಶಕ್ಕೆ ಪ್ರಯಾಣಿಸುತ್ತಿರುವ ಭಾರತದ ಮೊದಲ ಪ್ರಧಾನಿ ಮೋದಿ ಆಗಿದ್ದಾರೆ.

ಭಾರತಕ್ಕೆ ಕೊಟ್ಟರೆ ಪಾಕ್‌ಗೂ ಕೊಡಿ: ಚೀನಾ
ವಿಯನ್ನ, ಜೂ. 9: ಪರಮಾಣು ಪೂರೈಕೆದಾರರ ಗುಂಪಿಗೆ ಭಾರತವನ್ನು ಸೇರಿಸುವ ಪ್ರಸ್ತಾಪವನ್ನು ವಿರೋಧಿಸುವ ಅಭಿಯಾನದ ನೇತೃತ್ವವನ್ನು ಚೀನಾ ವಹಿಸಿಕೊಂಡಿದೆ ಎಂದು ರಾಜತಾಂತ್ರಿಕರು ಗುರುವಾರ ಹೇಳಿದ್ದಾರೆ.
ಸದಸ್ಯತ್ವ ಕೋರಿ ಭಾರತ ಮೇ ತಿಂಗಳಲ್ಲಿ ಸಲ್ಲಿಸಿರುವ ಅರ್ಜಿಯ ಬಗ್ಗೆ ಚರ್ಚೆ ನಡೆಸಲು ಗುಂಪು ವಿಯನ್ನದಲ್ಲಿ ಸಭೆ ಸೇರಿದೆ.
ಭಾರತಕ್ಕೆ ಎನ್‌ಎಸ್‌ಜಿಯ ಸದಸ್ಯತ್ವ ನೀಡಿದರೆ ಪಾಕಿಸ್ತಾನಕ್ಕೂ ನೀಡಬೇಕು ಎಂಬುದಾಗಿ ಚೀನಾ ಒತ್ತಾಯಿಸುತ್ತಿದೆ. ಪಾಕಿಸ್ತಾನ ಚೀನಾದ ಮಿತ್ರ ದೇಶವಾಗಿದೆ.
‘‘ಚೀನಾ ತನ್ನ ನಿಲುವನ್ನು ಕಠಿಣಗೊಳಿಸುತ್ತಿದೆ’’ ಎಂದು ರಾಜತಾಂತ್ರಿಕರೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News