×
Ad

570 ಕೋ.ರೂ. ವಶ ಪ್ರಕರಣ

Update: 2016-06-09 23:30 IST

ಚೆನ್ನೈ,ಜೂ.9: ತಮಿಳುನಾಡು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು 570 ಕೋ.ರೂ.ಗಳನ್ನು ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಿತಿಗತಿ ವರದಿಯೊಂದನ್ನು ಎರಡು ವಾರಗಳಲ್ಲಿ ತನಗೆ ಸಲ್ಲಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ಗುರುವಾರ ಸಿಬಿಐಗೆ ನಿರ್ದೇಶ ನೀಡಿದೆ.
ಮೇ 13ರಂದು ತಿರುಪುರ ಜಿಲ್ಲೆಯಲ್ಲಿ ಮೂರು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದ 570 ಕೋ.ರೂ.ನಗದನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿರುವ ಡಿಎಂಕೆಯ ಮಾಧ್ಯಮ ಸಂಪರ್ಕ ಕಾರ್ಯದರ್ಶಿ ಹಾಗೂ ಸಂಸದ ಟಿಕೆಎಸ್ ಇಳಂಗೋವನ್ ಪರ ಹಾಜರಾಗಿದ್ದ ಹಿರಿಯ ವಕೀಲ ಪಿ.ವಿಲ್ಸನ್ ಅವರು,ನಗದು ಹಣವನ್ನು ಸಾಗಿಸುತ್ತಿದ್ದ ಲಾರಿಗಳು ನಕಲಿ ನೋಂದಣಿ ಸಂಖ್ಯೆಗಳನ್ನು ಹೊಂದಿದ್ದವು ಮತ್ತು ಹಣ ತನಗೆ ಸೇರಿದ್ದೆಂದು ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿಕೊಂಡಿದ್ದರೂ ಕರೆನ್ಸಿ ನೋಟುಗಳ ಕಟ್ಟುಗಳು ಎಕ್ಸಿಸ್ ಬ್ಯಾಂಕಿನ ಮುದ್ರೆಯನ್ನು ಹೊಂದಿದ್ದವು ಎಂದು ಆರೋಪಿಸಿದರು.
ಹಣ ಸಾಗಾಟಕ್ಕೆ ಆರ್‌ಬಿಐ ಅನುಮತಿ ನೀಡಿರಲಿಲ್ಲ. ಹಾಗಿದ್ದರೂ ಅನುಮತಿ ನೀಡಿದೆಯೆಂದು ಹೇಳಿಕೊಂಡ ಎಸ್‌ಬಿಐ ‘ನಕಲಿ ಪತ್ರ’ಗಳನ್ನು ನೀಡಿದ್ದು,ಇದು ಈ ಹಣ ಹವಾಲಾ ವಹಿವಾಟಿನದು ಮತ್ತು ಬಹುಶಃ ಅಪರಾಧ ಕೃತ್ಯಗಳ ಮೂಲಕ ಸಂಪಾದಿಸಿದ್ದು ಎನ್ನುವುದನ್ನು ತೋರಿಸುತ್ತಿದೆ ಎಂದರು.
ಮೇ 31ರಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಹವಾಲೊಂದನ್ನು ಸಲ್ಲಿಸಿದ್ದ ಡಿಎಂಕೆ,ಪ್ರಕರಣದ ಕುರಿತು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗೆ ಆದೇಶಿಸುವಂತೆ ಕೋರಿತ್ತು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News