ಆಧಾರ್ ಜೋಡಣೆಗೆ ಪಿಂಚಣಿದಾರರಿಗೆ ನೆರವಾಗಲಿರುವ ಅಂಚೆ ಕಚೇರಿಗಳು
Update: 2016-06-09 23:33 IST
ಹೊಸದಿಲ್ಲಿ,ಜೂ.9: ಪಿಂಚಣಿದಾರರು ತಮ್ಮ ಖಾತೆಗಳನ್ನು ಆಧಾರ್ ಸಂಖ್ಯೆಗಳಿಗೆ ಜೋಡಣೆ ಮಾಡಲು ಶೀಘ್ರವೇ ದೇಶಾದ್ಯಂತದ ಅಂಚೆ ಕಚೇರಿಗಳು ನೆರವಾಗಲಿವೆ.
ಜೊತೆಗೆ ಕೇಂದ್ರವು ಈಶಾನ್ಯ ರಾಜ್ಯಗಳಲ್ಲಿಯ ಪಿಂಚಣಿದಾರರಿಗೆ ತ್ವರಿತವಾಗಿ ಆಧಾರ್ ಸಂಖ್ಯೆ ದೊರೆಯುವಂತಾಗಲು ಕ್ರಮಗಳನ್ನು ಕೈಗೊಳ್ಳಲಿದೆ.
ಸಿಬ್ಬಂದಿ,ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವಾಲಯವು ಪಿಂಚಣಿದಾರರಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಕಳೆದ ವಾರ ಪಿಂಚಣಿದಾರರ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಅಂಚೆ ಕಚೇರಿಗಳ ಮೂಲಕ ತಮ್ಮ ಪಿಂಚಣಿಯನ್ನು ಪಡೆದುಕೊಳ್ಳುತ್ತಿರುವ ಪಿಂಚಣಿದಾರರು ತಮ್ಮ ಖಾತೆಗಳೊಂದಿಗೆ ಆಧಾರ್ ಸಂಖ್ಯೆಗಳನ್ನು ಇನ್ನಷ್ಟೇ ಜೋಡಿಸಬೇಕಾಗಿದೆ. ಅಂಚೆ ಕಚೇರಿಗಳಲ್ಲಿ ಆಧಾರ್ ಜೋಡಣೆಯ ಸೌಲಭ್ಯದ ಕೊರತೆ ಇದಕ್ಕೆ ಕಾರಣ ಎಂದು ಜೈಪುರದ ಕೇಂದ್ರ ಸರಕಾರಿ ಪಿಂಚಣಿದಾರರ ಸಂಘವು ಸಚಿವಾಲಯದ ಗಮನಕ್ಕೆ ತಂದಿತ್ತು.