ವಿಶ್ವಾದ್ಯಂತ ಏಡ್ಸ್ ನಿಯಂತ್ರಣಕ್ಕೆ ಶೇ.80ರಷ್ಟು ಔಷಧ ಭಾರತದಿಂದಲೇ ಪೂರೈಕೆ: ಸಚಿವ ನಡ್ಡಾ
ವಿಶ್ವಸಂಸ್ಥೆ,ಜೂ.9: ಮಾರಣಾಂತಿಕ ಏಡ್ಸ್ ವಿರುದ್ಧ ಹೋರಾಟಕ್ಕೆ ವಿಶ್ವಾದ್ಯಂತ ಬಳಕೆಯಾಗುತ್ತಿರುವ ಶೇ.80ರಷ್ಟು ಔಷಧಗಳನ್ನು ಭಾರತೀಯ ಔಷಧ ತಯಾರಿಕೆ ಕಂಪೆನಿಗಳು ಪೂರೈಸುತ್ತಿವೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಎಚ್‌ಐವಿ ಚಿಕಿತ್ಸೆ ಹೆಚ್ಚಿನ ರೋಗಿಗಳಿಗೆ ಲಭ್ಯವಾಗುವಲ್ಲಿ ಈ ಕಡಿಮೆ ಬೆಲೆಗಳ ಜನರಿಕ್ ಔಷಧಗಳು ನೆರವಾಗುತ್ತಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರು ಇಲ್ಲಿ ಹೇಳಿದರು.
ಎಚ್‌ಐವಿ/ಏಡ್ಸ್ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, 15 ವರ್ಷಗಳ ಹಿಂದೆ ಭಾರತವು ಏಡ್ಸ್‌ನ ವಿನಾಶಕಾರಿ ಹಾವಳಿಗೊಳಗಾಗಿತ್ತು, ಆದರೆ ಆ ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸುವಲ್ಲಿ ದೇಶವು ಯಶಸ್ವಿಯಾಗಿದೆ. ಇಂದು ಏಡ್ಸ್ ವಿರುದ್ಧ ಜಾಗತಿಕ ಹೋರಾಟಕ್ಕೆ ಶೇ.80ಕ್ಕೂ ಅಧಿಕ ಔಷಧಿಗಳು ಭಾರತದಿಂದಲೇ ಪೂರೈಕೆಯಾಗುತ್ತಿವೆ ಎಂದರು.
ಎಚ್‌ಐವಿ/ಏಡ್ಸ್ ಪಿಡುಗಿನ ವಿರುದ್ಧ ಹೋರಾಟದಲ್ಲಿ ಅಗ್ಗದ ಔಷಧಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಿರುವ ನೂತನ ರಾಜಕೀಯ ಘೋಷಣೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂಗೀಕರಿಸಿದೆ.
ಏಡ್ಸ್ ಪಿಡುಗು ಮರುಕಳಿಸಿದರೆ ಅದು ಅಂತಾರಾಷ್ಟ್ರೀಯ ಸಮುದಾಯಕ್ಕೆ ದುಬಾರಿಯಾಗಲಿದೆ ಎಂದು ಒತ್ತಿ ಹೇಳಿದ ನಡ್ಡಾ, ಅಭಿವೃದ್ಧಿಶೀಲ ರಾಷ್ಟ್ರಗಳು ಈ ಪಿಡುಗಿನ ವಿರುದ್ಧ ಹೋರಾಡುವ ಹೆಚ್ಚಿನ ಬದ್ಧತೆಗಳನ್ನು ಹೊಂದಬೇಕಾಗಿದೆ ಎಂದು ಹೇಳಿದರು.
2007ರಿಂದೀಚೆಗೆ ಭಾರತದಲ್ಲಿ ಏಡ್ಸ್‌ನಿಂದ ಸಾವುಗಳ ಸಂಖ್ಯೆ ಸುಮಾರು ಶೇ.55ರಷ್ಟು ಕಡಿಮೆಯಾಗಿದ್ದು, 2000ರಿಂದೀಚೆಗೆ ಹೊಸ ಎಚ್‌ಐವಿ ಸೋಂಕುಗಳ ಪ್ರಮಾಣ ಶೇ.66ರಷ್ಟು ತಗ್ಗಿದೆ. ಪ್ರಸ್ತುತ ಸುಮಾರು ಒಂದು ಮಿಲಿಯನ್ ಏಡ್ಸ್ ಪೀಡಿತರು ಏಆರ್‌ಟಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದ ಸಚಿವರು, ಕೈಗೆಟಕುವ ಬೆಲೆಗಳಲ್ಲಿ ಔಷಧಗಳು ಲಭ್ಯವಾಗಿರದಿದ್ದರೆ ಈ ಗಣನೀಯ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ ಎಂದರು.