×
Ad

ವೌಲ್ಯಮಾಪಕರ ಬೇಜವಾಬ್ದಾರಿ..!?

Update: 2016-06-09 23:45 IST

ಮಾನ್ಯರೆ,
ಈ ಸಲದ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯೊಬ್ಬ ಪೂರ್ತಿ 625 ಅಂಕ ಪಡೆದದ್ದು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಆ ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಹಲವು ವೌಲ್ಯಮಾಪಕರು ಪರಿಶೀಲಿಸಿದರೂ ಅಂಕಗಳಲ್ಲಿ ವ್ಯತ್ಯಾಸ ಬರಲಿಲ್ಲ ಎಂಬ ಸುದ್ದಿಯಿದೆ. ಆದರೆ ಬಂಟ್ವಾಳ ಶಾಲೆಯ ವಿದ್ಯಾರ್ಥಿಯೊಬ್ಬಳು ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದುಕೊಂಡಾಗ 20 ಅಂಕಗಳ ವ್ಯತ್ಯಾಸ ಬಂದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ಬೇಜವಾಬ್ದಾರಿಗೆ ಏನೆನ್ನಬೇಕು?
ಇಂಗ್ಲಿಷ್ ವಿಷಯದಲ್ಲಿ ಹೆಚ್ಚಿನ ಅಂಕ ನಿರೀಕ್ಷಿಸಿದ್ದ ವಿದ್ಯಾರ್ಥಿನಿಯೊಬ್ಬಳು ರೂ. 300 ಸಲ್ಲಿಸಿ ಉತ್ತರ ಪತ್ರಿಕೆಯ ಛಾಯಾಪ್ರತಿ ಪಡೆದುಕೊಂಡಾಗ ಈ ಅಂಕಗಳ ಎಡವಟ್ಟು ಗಮನಕ್ಕೆ ಬಂದಿದ್ದು, ಆ ಶಾಲೆಯ ಇನ್ನಷ್ಟು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಛಾಯಾಪ್ರತಿಗೆ ಅರ್ಜಿಸಲ್ಲಿಸಿದ್ದು ಅಂಕಗಳು ಇನ್ನಷ್ಟು ಬದಲಾಗುವ ಸಂಭವವಿದೆ.
ಒಂದಿಷ್ಟು ಅಂಕ ಕಡಿಮೆಯಾದರೂ ವಿದ್ಯಾರ್ಥಿಗಳನ್ನು ನಿರಾಕರಿಸುವ ವಿದ್ಯಾಸಂಸ್ಥೆಗಳಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳ ವಿದ್ಯಾರ್ಥಿ ಜೀವನಕ್ಕೆ ಸಂಬಂಧಿಸಿದಂತೆ ಮಹತ್ತರ ಘಟ್ಟದ ಈ ಎಸೆಸೆಲ್ಸಿ ಪರೀಕ್ಷೆಯ ವೌಲ್ಯ ಮಾಪನದಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಕೆಲವು ಬೇಜವಾಬ್ದಾರಿಯುತ ವೌಲ್ಯಮಾಪಕರ ದೆಸೆಯಿಂದ ಹಲವು ವಿದ್ಯಾರ್ಥಿಗಳು ನೊಂದುಕೊಳ್ಳುವಂತಾಗಿದೆ.
ಹಣ ಹೊಂದಿಸುವ ಪರಿಸ್ಥಿತಿಯಿದ್ದವರು ಪ್ರತೀ ಉತ್ತರ ಪತ್ರಿಕೆಯ ಛಾಯಾಪ್ರತಿಗೆ ರೂ. 300ನ್ನು ಕಟ್ಟಿ ಪಡೆದು ಕೊಂಡು ಅಂಕ ಸರಿಮಾಡಿಸಿಕೊಳ್ಳಬಹುದು. ಆದರೆ ತಾಕತ್ತಿಲ್ಲದ ಬಡಮಕ್ಕಳಿಗೆ ನ್ಯಾಯ ಒದಗಿಸುವವರು ಯಾರು?
 

Similar News