ಬೆಳ್ತಂಗಡಿ: ತಾಲೂಕು ಮಟ್ಟದ ಜೀವಜಲ ಮರುಪೂರಣ ಅಭಿಯಾನ

Update: 2016-06-10 11:47 GMT

ಬೆಳ್ತಂಗಡಿ, ಜೂ.10: ತಾಲೂಕು ಮಟ್ಟದ ಜೀವ ಜಲ ಮರುಪೂರಣ ಅಭಿಯಾನ-2016ರ ಉದ್ಘಾಟನಾ ಕಾರ್ಯಕ್ರಮ ಕಕ್ಕಿಂಜೆ ಶಾಲೆಯಲ್ಲಿ ನಡೆಯಿತು.

ಶಾಲೆಯಲ್ಲಿ ಹೊಸತಾಗಿ ರಚಿಸಿದ ಜೀವಜಲ ಮರುಪೂರಣ ಘಟಕಕ್ಕೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಬೆಳ್ತಂಗಡಿ ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಇಂತಹ ಕಾರ್ಯದಲ್ಲಿ ಎಲ್ಲರೂ ಕೈಗೂಡಿಸಿ ತಾಲೂಕಿನಲ್ಲಿ ನೀರಿನ ಅಭಾವ ಇಲ್ಲದಂತೆ ಮಾಡಲು ಸಹಕರಿಸಬೇಕು ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಜಿಪಂ ಸದಸ್ಯೆ ನಮಿತಾ, ಇದು ಶಾಲೆಯಲ್ಲಿ ಮಾತ್ರ ಮಾಡುವ ಕಾರ್ಯಕ್ರಮವಾಗದೆ ಪ್ರತಿಯೊಬ್ಬರ ಮನೆಯಲ್ಲೂ ಇಂತಹ ಕಾರ್ಯಕ್ರಮ ಅನುಷ್ಟಾನವಾಗಬೇಕು ಎಂದರು.

ಜೀವಜಲ ಮರುಪೂರಣ ಅಭಿಯಾನದ ಸಂಪನ್ಮೂಲ ವ್ಯಕ್ತಿ ಕೊಯ್ಯೂರು ಸರಕಾರಿ ಪ್ರೌಢಶಾಲೆಯ ಶಿಕ್ಷಕ ರಾಧಾಕೃಷ್ಣ ತಚ್ಚಮೆ, ನಾವು ಬೇಸಿಗೆ ಕಾಲದಲ್ಲಿ ಖಾಲಿ ಮಾಡಿದ ನೀರನ್ನು ಮಳೆಗಾಲದಲ್ಲಿ ತುಂಬುವುದೇ ಜೀವಜಲ ಮರುಪೂರಣ ಕಾರ್ಯಕ್ರಮ. ಇದರಲ್ಲಿ ಮಳೆ ನೀರಿನ ಮರು ಪೂರಣ, ಮಳೆ ನೀರಿನ ಬಳಕೆ ಕುರಿತು ಜಾಗೃತಿ ಮತ್ತು ಮಳೆ ನೀರಿನ ಮರು ಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಆ ಮೂಲಕ ಜನರಿಗೆ ತಿಳಿಸಲಾಗುತ್ತದೆ. ನಾವು ಭೂಮಿಯಿಂದ ಕೃತಕವಾಗಿ ಬೋರ್‌ವೆಲ್‌ಗಳ ಮುಖಾಂತರ ತೆಗೆದ ನೀರನ್ನು ಕೃತಕವಾಗಿ ಮರುಪೂರಣ ಮಾಡಿ ತುಂಬಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ರೇವತಿ ವಹಿಸಿದ್ದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಳಾ ಪಿ., ಉಪಯೋಜನಾ ಸಮನ್ವಯಾಧಿಕಾರಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಲೋಕೇಶ್ ಸಿ., ಉಪನಿರ್ದೇಶಕರ ಕಛೇರಿ ಕನ್ನಡ ವಿಷಯ ಪರಿವೀಕ್ಷಕ ಶಮಂತ್, ಉಪಯೋಜನಾ ಸಮನ್ವಯಾಧಿಕಾರಿ ಸರ್ವಶಿಕ್ಷಣ ಅಭಿಯಾನದ ಗೀತಾ, ಜೇಮ್ಸ್ ಕುಟಿನೋ, ಬೆಳ್ತಂಗಡಿ ಕ್ಷೇತ್ರ ಸಮನ್ವಯಾಧಿಕಾರಿ ತಾರಕೇಸರಿ, ಶಿಕ್ಷಣ ಸಂಯೋಜಕಿ ಲಲಿತ, ಬೆಳ್ತಂಗಡಿ ರೋಟರಿ ಅಧ್ಯಕ್ಷ ಎಂ.ವಿ. ಭಟ್, ನಿಯೋಜಿತ ಅಧ್ಯಕ ಡಿ.ಎಂ. ಗೌಡ ಉಪಸ್ಥಿತರಿದ್ದರು.

ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಶಾಲೆಯ ಮುಖ್ಯ ಶಿಕ್ಷಕರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಎಸೆಸೆಲ್ಸಿ ರೀಕ್ಷೆಯಲ್ಲಿ 624 ಅಂಕ ಪಡೆದ ಸೈಂಟ್ ಮೇರಿ ಶಾಲೆಯ ವಿದ್ಯಾರ್ಥಿ ಸುಶ್ರುತ್ ಯು.ಕೆ. ಅವರನ್ನು ಗೌರವಿಸಿದರು.

ಕಾರ್ಯಕ್ರಮದ ಮೊದಲು ಸಂಪನ್ಮೂಲ ವ್ಯಕ್ತಿಯಿಂದ ಸ್ಲೈಡ್ ಶೋ ಮೂಲಕ ಮಾಹಿತಿ ನೀಡಲಾಯಿತು. ಶಾಲೆಯಲ್ಲಿ ಬಾವಿಗೆ ಜಲಮರುಪೂರಣ ಘಟಕ, ಮಳೆ ನೀರು ಕೊಯ್ಲು ಮಾಡಿ ನೇರವಾಗಿ ಬಳಸುವ ಘಟಕ ಹಾಗೂ ಇಂಗು ಗುಂಡಿ ರಚಿಸಿ ಪ್ರಾತ್ಯಕ್ಷಿಕೆ ನೀಡಲಾಗಿದೆ.

ಮುಖ್ಯಶಿಕ್ಷಕ ಪ್ರಕಾಶ್ ತೆಲಿಗಿ ಸ್ವಾಗತಿಸಿದರು. ಶಿಕ್ಷಕಿ ಜಯಾ ವಂದಿಸಿದರು. ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News