×
Ad

ಜಾನ್ಸನ್ ಆ್ಯಂಡ್ ಜಾನ್ಸನ್‌ನ 2 ಉತ್ಪನ್ನಗಳ ಪರೀಕ್ಷೆಗೆ ಎನ್‌ಸಿಪಿಸಿಆರ್ ಆದೇಶ

Update: 2016-06-10 18:50 IST

ಹೊಸದಿಲ್ಲಿ, ಜೂ.10: ಅಮೆರಿಕದ ಜಾನ್ಸನ್ ಆ್ಯಂಡ್ ಜಾನ್ಸನ್‌ನ 2 ಜನಪ್ರಿಯ ಮಕ್ಕಳ ಆರೈಕೆಯ ಉತ್ಪಾದನೆಗಳ ಪ್ರಯೋಗಾಲಯ ಪರೀಕ್ಷೆಗೆ ಸರಕಾರದ ಮಕ್ಕಳ ಹಕ್ಕು ಸಂಸ್ಥೆಯೊಂದು ಆದೇಶ ನೀಡಿದೆ. ಈ ಕಂಪೆನಿಯು ತನ್ನ ಟಾಲ್ಕ್ ಆಧರಿತ ಉತ್ಪನ್ನಗಳ ಆರೋಗ್ಯ ಅಪಾಯಗಳ ಕುರಿತು ಎಚ್ಚರಿಕೆ ವಹಿಸಿಲ್ಲವೆಂಬ ಕುರಿತಾದ ಅಮೆರಿಕ ನ್ಯಾಯಾಲಯಗಳ ಹಲವು ಆದೇಶಗಳನ್ನು ಅನುಲಕ್ಷಿಸಿ, ಅದು ಸ್ವಯಂ ಪ್ರೇರಣೆಯಿಂದ ಈ ಆದೇಶ ನೀಡಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಬೇಬಿ ಪೌಡರ್ ಹಾಗೂ ಶಾಂಪೂಗಳ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸುವಂತೆ ಗುಜರಾತ್, ಜಾರ್ಖಂಡ್, ಅಸ್ಸಾಂ, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳಿಗೆ ಮಕ್ಕಳ ಹಕ್ಕು ರಕ್ಷಣೆಯ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಸೂಚಿಸಿದೆ.

ಜಾನ್ಸನ್ ಆ್ಯಂಡ್ ಜಾನ್ಸನ್ ಉತ್ಪಾದನೆಗಳು ಅಸ್ಬೆಸ್ಟಾಸ್ ಹಾಗೂ ಫಾರ್ಮಾಲ್ಡಿಹೈಡ್‌ಗಳಂತಹ ಕ್ಯಾನ್ಸರ್‌ಕಾರಕ ವಸ್ತುಗಳನ್ನು ಒಳಗೊಂಡಿರಬಹುದಾದ ಕಾರಣ, ಆ ಕಂಪೆನಿಯ ಉತ್ಪನ್ನಗಳ ಉಪಯೋಗದ ಬಗ್ಗೆ ಕಳವಳವನ್ನು ಸೂಚಿಸಿದ ಪತ್ರಿಕಾ ವರದಿಗಳು ಬಂದಿವೆಯೆಂದು ಅದು ಕಳೆದ ತಿಂಗಳು ರಾಜ್ಯಗಳಿಗೆ ಬರೆದಿದ್ದ ಪತ್ರದಲ್ಲಿ ತಿಳಿಸಿದೆ.

ಈ ಬಗ್ಗೆ ಕಂಪೆನಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸರಕಾರದಿಂದ ತಮಗೆ ಅಂತಹ ಯಾವುದೇ ವಿಚಾರಣೆ ಬಂದಿಲ್ಲ. ಜಾನ್ಸನ್ ಆ್ಯಂಡ್ ಜಾನ್ಸನ್ 2015ರಿಂದಲೇ ಯಾವುದೇ ನಿರ್ಜಲಕಾರಕದ ಬಳಕೆಯನ್ನು ನಿಲ್ಲಿಸಿದೆಯೆಂದು ಹೇಳಿದ್ದಾರೆ.

ಸ್ವಯಂ ಪ್ರೇರಿತ ನಿರ್ಧಾರ ಕೈಗೊಳ್ಳುವ ಅಧಿಕಾರ ತಮಗಿದೆ. ತಾವದನ್ನು ಮಾಡಿದ್ದೇವೆ. ಇದೊಂದು ಸತ್ಯಶೋಧನೆಯ ಕ್ರಮವಾಗಿದೆ. ಎಲ್ಲರೂ ತಮ್ಮ ಮಕ್ಕಳನ್ನು ಕಾಪಾಡಬೇಕಾಗಿದೆ. ಯಾವುದೇ ತಪ್ಪು ಕಂಡು ಬಂದಲ್ಲಿ ತಾವು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆಂದು ಎನ್‌ಸಿಪಿಸಿಆರ್‌ನ ಅಧ್ಯಕ್ಷೆ ಸ್ತುತಿ ಕಕ್ಕರ್ ತಿಳಿಸಿದ್ದಾರೆ.

ಸರಕಾರದಿಂದ ಅಂಗೀಕೃತ ಪ್ರಯೋಗಾಲಯಗಳಲ್ಲೇ ಮಾದರಿಗಳ ಪರೀಕ್ಷೆ ನಡೆಸುವಂತೆ ಮಕ್ಕಳ ಹಕ್ಕು ಸಂಸ್ಥೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News