ಜಾಗತಿಕ ತಾಪಮಾನದ ಅನಿಲವನ್ನು ಕಲ್ಲಾಗಿ ಪರಿವರ್ತಿಸಿದ ವಿಜ್ಞಾನಿಗಳು

Update: 2016-06-10 15:13 GMT

ವಾಶಿಂಗ್ಟನ್, ಜೂ. 10: ಭೂಮಿಯ ಉಷ್ಣತೆಯನ್ನು ಹೆಚ್ಚಿಸುವ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಅಪಾಯರಹಿತ ಕಲ್ಲನ್ನಾಗಿ ಮಾಡುವ ವಿಧಾನವೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಈ ವಿಧಾನ ಉಪಯುಕ್ತವೇನೋ ಹೌದು, ಆದರೆ, ದುಬಾರಿ ಕೂಡ.

ಐಸ್‌ಲ್ಯಾಂಡ್‌ನ ಗುಡ್ಡಗಾಡು ಪ್ರದೇಶದಲ್ಲಿ 540 ಮೀಟರ್ ಆಳದಲ್ಲಿ ‘ಕಾರ್ಬ್‌ಫಿಕ್ಸ್’ ಎಂದು ಕರೆಯಲ್ಪಡುವ ಈ ಪ್ರಯೋಗವನ್ನು ಸುಮಾರು 10 ಮಿಲಿಯ ಡಾಲರ್ (ಸುಮಾರು 67 ಕೋಟಿ ರೂಪಾಯಿ) ವೆಚ್ಚದಲ್ಲಿ ಎರಡು ವರ್ಷಗಳ ಕಾಲ ನಡೆಸಲಾಗಿದೆ. ಇದರ ಫಲಿತಾಂಶವು ಮಾನವ ನಿರ್ಮಿತ ಜಾಗತಿಕ ತಾಪಮಾನದ ವಿರುದ್ಧ ಹೋರಾಡಲು ಪರಿಣಾಮಕಾರಿ ಆಯುಧದ ಬಗ್ಗೆ ಹೊಸ ಭರವಸೆಯನ್ನು ನೀಡಿದೆ ಎಂದು ಪರಿಣತರು ಹೇಳುತ್ತಾರೆ.

ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಇಂಗಾಲದ ಡೈ ಆಕ್ಸೈಡ್ ಮತ್ತು ನೀರಿನ ಮಿಶ್ರಣವನ್ನು ಭೂಗತ ಬಸಾಲ್ಟ್ ಬಂಡೆಗಳಿಗೆ ಹರಿಸಿದಾಗ ಪ್ರಾಥಮಿಕ ರಾಸಾಯನಿಕ ಕ್ರಿಯೆಗಳು ನಡೆದವು. ಆಮ್ಲೀಯ ಮಿಶ್ರಣವು ಬಂಡೆಯ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂನ್ನು ಕರಗಿಸಿ ಸುಣ್ಣದಕಲ್ಲನ್ನು (ಲೈಮ್ ಸ್ಟೋನ್) ನಿರ್ಮಿಸಿದವು. ಇದು ಉಷ್ಣವನ್ನು ತಡೆಹಿಡಿಯುವ ಅನಿಲಕ್ಕೆ ಶಾಶ್ವತ ನೈಸರ್ಗಿಕ ಸೆರೆಮನೆಯಾಗಿದೆ ಎಂಬುದಾಗಿ ಇಂಗ್ಲೆಂಡ್‌ನ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ಜುವಾರ್ಗ್ ಮ್ಯಾಟರ್ ಹೇಳಿದರು.

ಈ ಸಂಶೋಧನೆಯು ‘ಸಯನ್ಸ್’ ಪತ್ರಿಕೆಯಲ್ಲಿ ಗುರುವಾರ ಪ್ರಕಟಗೊಂಡಿದೆ.

‘‘ಅದು ಇನ್ನು ಅನಿಲವಾಗಿ ಉಳಿದಿಲ್ಲ. ಮುಖ್ಯವಾಗಿ ಇಂಗಾಲದ ಡೈ ಆಕ್ಸೈಡ್ ಕಲ್ಲಾಗಿ ಪರಿವರ್ತನೆಗೊಂಡಿದೆ’’ ಎಂದು ಮ್ಯಾಟರ್ ನುಡಿದರು.

ಆದರೆ, ಈ ಪ್ರಕ್ರಿಯೆ ವೆಚ್ಚದಾಯಕವಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಒಂದು ಟನ್ ಇಂಗಾಲದ ಡೈ ಆಕ್ಸೈಡನ್ನು ಸಂಸ್ಕರಿಸಲು 17 ಡಾಲರ್ (ಸುಮಾರು 1,134 ರೂಪಾಯಿ) ಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News