2060ರ ವೇಳೆಗೆ ವಾಯು ಮಾಲಿನ್ಯ ಸಾವಿನ ಸಂಖ್ಯೆ 90 ಲಕ್ಷಕ್ಕೆ ಏರಿಕೆ

Update: 2016-06-10 15:17 GMT

ವಾಶಿಂಗ್ಟನ್, ಜೂ. 10: ವಾಯು ಮಾಲಿನ್ಯವು 2060ರ ವೇಳೆಗೆ ಜಾಗತಿಕವಾಗಿ 60ರಿಂದ 90 ಲಕ್ಷ ಅವಧಿಪೂರ್ವ ಸಾವುಗಳಿಗೆ ಕಾರಣವಾಗಬಹುದು ಹಾಗೂ ಇಂಥ ಸಾವುಗಳು ಭಾರತ ಮತ್ತು ಚೀನಾಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುವುದು ಎಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ (ಒಇಸಿಡಿ) ಸಂಸ್ಥೆ (ಒಇಸಿಡಿ)ಯ ವರದಿಯೊಂದು ತಿಳಿಸಿದೆ.

ಮನೆ ಹೊರಗಿನ ವಾಯು ಮಾಲಿನ್ಯವು 2010ರಲ್ಲಿ 30 ಲಕ್ಷಕ್ಕೂ ಅಧಿಕ ಅವಧಿಪೂರ್ವ ಸಾವುಗಳಿಗೆ ಕಾರಣವಾಗಿದೆ ಎಂದು ‘ವಾಯು ಮಾಲಿನ್ಯದ ಆರ್ಥಿಕ ಪರಿಣಾಮಗಳು’ ಎಂಬ ವರದಿ ಹೇಳಿದೆ.

 ‘‘ಮನೆ ಹೊರಗಿನ ವಾಯು ಮಾಲಿನ್ಯವು 2060ರ ವೇಳೆಗೆ 60 ಲಕ್ಷದಿಂದ 90 ಲಕ್ಷ ಅವಧಿಪೂರ್ವ ಸಾವುಗಳಿಗೆ ಕಾರಣವಾಗುತ್ತದೆ ಹಾಗೂ ಅನಾರೋಗ್ಯದ ದಿನಗಳು, ವೈದ್ಯಕೀಯ ಬಿಲ್‌ಗಳು ಮತ್ತು ಕಡಿಮೆ ಕೃಷಿ ಉತ್ಪನ್ನಗಳ ರೂಪದಲ್ಲಿ ವಾರ್ಷಿಕ 2.6 ಲಕ್ಷ ಕೋಟಿ ಡಾಲರ್ ಅಂದರೆ ಜಾಗತಿಕ ಜಿಡಿಪಿಯ 1 ಶೇಕಡದಷ್ಟು ವೆಚ್ಚವಾಗುತ್ತವೆ’’ ಎಂದು ವರದಿ ಹೇಳಿದೆ.

ಅಂದರೆ ಕೆಟ್ಟ ಗಾಳಿಯಿಂದಾಗಿ ಸಂಭವಿಸುವ ಅವಧಿಪೂರ್ವ ಸಾವುಗಳ ಸಂಖ್ಯೆ ದುಪ್ಪಟ್ಟು ಅಥವಾ ಮೂರು ಪಟ್ಟು ಕೂಡ ಆಗಬಹುದು ಎನ್ನುವ ಇಂಗಿತವನ್ನು ವರದಿ ನೀಡಿದೆ. ಅಂದರೆ, 2060ರ ವೇಳೆಗೆ ಪ್ರತಿ 4 ಅಥವಾ 5 ಸೆಕೆಂಡ್‌ಗಳಿಗೆ ಒಮ್ಮೆ ಒಂದು ಅವಧಿಪೂರ್ವ ಸಾವು ಸಂಭವಿಸುತ್ತದೆ.

‘‘ವಾಯು ಮಾಲಿನ್ಯದಿಂದ ಸಂಭವಿಸುವ ಅವಧಿಪೂರ್ವ ಸಾವುಗಳ ಸಂಖ್ಯೆಯಲ್ಲಿ ಅತಿ ಹೆಚ್ಚಿನ ಹೆಚ್ಚಳ ಸಂಭವಿಸುವುದು ಭಾರತ, ಚೀನಾ, ಕೊರಿಯ ಹಾಗೂ ಉಝ್ಬೆಕಿಸ್ತಾನ ಮುಂತಾದ ಮಧ್ಯ ಏಶ್ಯ ದೇಶಗಳಲ್ಲಿ. ಈ ದೇಶಗಳ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತದೆ ಹಾಗೂ ಅದರ ಪರಿಣಾಮವಾಗಿ ನಗರಗಳು ಕಿಕ್ಕಿರಿದು ತುಂಬುತ್ತವೆ. ಅಂದರೆ ಹೆಚ್ಚಿನ ಜನರು ವಿದ್ಯುತ್ ಸ್ಥಾವರಗಳು ಮತ್ತು ವಾಹನಗಳ ಮಾಲಿನ್ಯಕ್ಕೆ ತುತ್ತಾಗುತ್ತಾರೆ’’ ಎಂದು ವರದಿ ಹೇಳಿದೆ.

2010ಕ್ಕೆ ಹೋಲಿಸಿದರೆ 2060ರಲ್ಲಿ ಅವಧಿಪೂರ್ವ ಸಾವುಗಳ ಸಂಖ್ಯೆ ಚೀನಾದಲ್ಲಿ ಮೂರು ಪಟ್ಟು ಹಾಗೂ ಭಾರತದಲ್ಲಿ ನಾಲ್ಕು ಪಟ್ಟು ಆಗಿರುತ್ತದೆ ಎಂದಿದೆ.

ಹೆಚ್ಚಿನ ಸಂಖ್ಯೆಯ ಸಾವುಗಳು ಚೀನಾ ಮತ್ತು ಭಾರತ ಮುಂತಾದ ಭಾರೀ ಜನಸಾಂದ್ರತೆಯ ವಲಯಗಳಲ್ಲಿ ಹಾಗೂ ಚೀನಾ ಮತ್ತು ಪೂರ್ವ ಯುರೋಪ್ ಮುಂತಾದ ಹಿರಿಯ ನಾಗರಿಕರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಸಂಭವಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News