ತೃಪ್ತಿ- ಅತೃಪ್ತಿಯ ನಡುವೆ ಪರಿಹಾರ ಮೊತ್ತ ಸ್ವೀಕಾರ

Update: 2016-06-11 07:58 GMT

ಮಂಗಳೂರು, ಜೂ.11: ನಂತೂರಿನಿಂದ ತಲಪಾಡಿ ಹಾಗೂ ಸುರತ್ಕಲ್‌ನಿಂದ ಮುಲ್ಕಿವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡುವ ವಿಶೇಷ ಅದಾಲತ್ ಕೆಲವರಿಗೆ ತೃಪ್ತಿ ನೀಡಿದರೆ, ಮತ್ತೆ ಕೆಲವರಿಗೆ ಪರಿಹಾರ ಮೊತ್ತದ ಬಗ್ಗೆ ಅಸಮಾಧಾನ, ಇನ್ನು ಕೆಲವರು ಸೂಕ್ತ ದಾಖಲೆಗಳಿಲ್ಲದೆ ಪರದಾಟದ ದೃಶ್ಯಗಳಿಗೆ ಸಾಕ್ಷಿಯಾಯಿತು.

ಒಟ್ಟು 17 ಗ್ರಾಮಗಳಲ್ಲಿ ರಾಷ್ಟೀಯ ಹೆದ್ದಾರಿಗೆ ಭೂಸ್ವಾಧೀನಗೊಂಡು ಪರಿಹಾರ ಪಡೆಯದವರ ಪೈಕಿ 376 ಮಂದಿ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. ಅದರಲ್ಲಿ ಕಳೆದ ಎರಡು ವರ್ಷಗಳಲ್ಲಿ 296 ಪ್ರಕರಣಗಳಲ್ಲಿ ಪರಿಹಾರ ಹೆಚ್ಚಿಸಿ ಆದೇಶ ನೀಡಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಒಟ್ಟು 17 ಗ್ರಾಮಗಳಲ್ಲಿ 56.72 ಹೆಕ್ಟೇರ್ ಭೂಸ್ವಾಧೀನಗೊಂಡಿದ್ದು, ಅದರಲ್ಲಿ ಕೇವಲ 34.51 ಹೆಕ್ಟೇರ್‌ಗೆ ಮಾತ್ರ ಪರಿಹಾರ ಪಾವತಿಸಲಾಗಿದೆ. ಉಳಿದ 22.21 ಹೆಕ್ಟೇರ್ ಜಮೀನಿಗೆ ಅಂದಾಜು 900 ಖಾತೆದಾರರಿಗೆ 53.62 ಕೋಟಿ ರೂ. ಪರಿಹಾರ ಪಾವತಿಸುವ ಸಲುವಾಗಿ ಇಂದು ವಿಶೇಷ ಅದಾಲತ್ ನಗರದ ಮಿನಿ ವಿಧಾನಸೌಧದಲ್ಲಿ ನಡೆಯಿತು. ಪರಿಹಾರ ಪಡೆಯಲು ನೂರಾರು ಸಂಖ್ಯೆಯಲ್ಲಿ ಅರ್ಜಿದಾರರು ಆಗಮಿಸಿದ್ದು, ಸೂಕ್ತ ದಾಖಲೆಗಳನ್ನು ಹೊಂದಿದವರಿಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಹಾಗೂ ಸಹಾಯಕ ಆಯುಕ್ತ ಡಾ. ಅಶೋಕ್ ಕುಮಾರ್ ಉಪಸ್ಥಿತಿಯಲ್ಲಿ ಪರಿಹಾರಧನದ ಚೆಕ್ ವಿತರಿಸಲಾಯಿತು.

ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಪರಿಹಾರ ಪಡೆದುಕೊಳ್ಳಲು ಬಾಕಿ ಇರುವ ಭೂಮಾಲಕರಲ್ಲಿ ಅನೇಕರು ತಮ್ಮ ಖಾತಾಗಳನ್ನು ಅಪ್‌ಡೇಟ್ ಮಾಡಿಕೊಂಡಿಲ್ಲ. ಕೆಲವರು ಸಮರ್ಪಕ ಅರ್ಜಿಯನ್ನೂ ಸಲ್ಲಿಸದ ಬಗ್ಗೆ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿಯೂ ಪರಿಹಾರ ಪಡೆದುಕೊಳ್ಳಲು ಬಾಕಿ ಇರುವವರು ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗುವಂತೆ ಅದಾಲತ್ ನಡೆಸಲಾಗುವುದು ಎಂದು ಹೇಳಿದರು.

ಈಗಾಗಲೇ ಪರಿಹಾರ ಪಡೆದುಕೊಂಡ ಕೆಲ ಭೂಮಾಲಕರು ತಮಗೆ ಮಂಜೂರಾದ ಹೆಚ್ಚುವರಿ ಪರಿಹಾರ ಪಡೆದುಕೊಂಡರು. ಪರಿಹಾರ ಮೊತ್ತದ ಬಗ್ಗೆ ಅತೃಪ್ತರಾದ ಕೆಲವರು ಮೇಲ್ಮನವಿ ಸಲ್ಲಿಸುವ ಬಗ್ಗೆಯೂ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News