ಕಾರ್ಯಕ್ರಮಕ್ಕೆ ಬಾರದಿದ್ದರೂ ಮೊಯ್ಲಿ, ಡಿವಿಗೆ ಕರಿ ಪತಾಕೆ!

Update: 2016-06-11 08:28 GMT

ಮಂಗಳೂರು,ಜೂ.11: ನಗರದ ಪುರಭವನದಲ್ಲಿ ಸ್ಥಳೀಯ ಚಾನೆಲೊಂದರ ದಶಮಾನೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಕೇಂದ್ರದ ಮಾಜಿ ಸಚಿವ ಹಾಗೂ ಪ್ರಸಕ್ತ ಸಂಸದ ವೀರಪ್ಪ ಮೊಯ್ಲಿಯವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿದ್ದರೂ, ಆದರೆ ಇಂದಿನ ಕಾರ್ಯಕ್ರಮ ಅವರಿಬ್ಬರೂ ಅನುಪಸ್ಥಿತರಾಗಿದ್ದರೂ ಕರಿ ಪತಾಕೆ ಪ್ರದರ್ಶನದೊಂದಿಗೆ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ವಿನೂತನವಾಗಿ ಪ್ರತಿಭಟಿಸಿತು.

ಪುರಭವನದ ಎದುರಿನ ಮಿನಿ ವಿಧಾನಸೌಧದಿಂದ ಕರಿ ಪತಾಕೆಯೊಂದಿಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಸಚಿವ ಡಿವಿ ಹಾಗೂ ಸಂಸದ ಮೊಯ್ಲಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಎತ್ತಿನಹೊಳೆ ಯೋಜನೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ ಪ್ರತಿಭಟನಾಕಾರರು ಪುರಭವನದ ಗೇಟಿನೊಳಗೆ ಪ್ರವೇಶಿಸಲು ಯತ್ನಿಸಿದಾಗ ಅಲ್ಲಿದ್ದ ಪೊಲೀಸರು ತಡೆಯಲೆತ್ನಿಸಿದರು. ಆದರೆ ಸುಮಾರು 50ಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಗೇಟಿನೊಳಗೆ ಪ್ರವೇಶಿಸಿ ಪುರಭವನದ ಎದುರು ಕೆಲಹೊತ್ತು ಕರಿ ಪತಾಕೆ ಹಿಡಿದು ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ‘‘ಸ್ಥಳೀಯ ಚಾನೆಲ್‌ನ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸುವುದು ನಮ್ಮ ಉದ್ದೇಶವಲ್ಲ. ಆದರೆ, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಮಾಜಿ ಸಚಿವರಾದ ವೀರಪ್ಪ ಮೊಯ್ಲಿಯವರು ಭಾಗವಹಿಸುತ್ತಾರೆಂಬ ಮಾಹಿತಿಯ ಮೇರೆಗೆ ಅವರಿಗೆ ಕರಿ ಪತಾಕೆ ಹಿಡಿಯಲು ಬಂದಿದ್ದೆವು. ಆದರೆ ನಮ್ಮ ಪ್ರತಿಭಟನೆಯ ಬಗ್ಗೆ ಮೊದಲೇ ಅರಿವಿದ್ದ ಅವರಿಬ್ಬರೂ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಮೊಯ್ಲಿ ಹಾಗೂ ಡಿವಿಗೆ ನಗರದಲ್ಲಿ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವುದಿಲ್ಲ’’ ಎಂದರು.

‘‘ನಗರದ ಎಲ್ಲಾ ಸಂಘ, ಸಂಸ್ಥೆಗಳವರೂ ಅವರಿಬ್ಬರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಬಾರದು’’ ಎಂದು ಮನವಿ ಮಾಡಿದ ವಿಜಯ ಕುಮಾರ್ ಶೆಟ್ಟಿ, ಇನ್ನೂ ತಡವಾಗಿಲ್ಲ. ಇವರಿಬ್ಬರೂ ಸರಕಾರದ ಮನವೊಲಿಸಿ ಯೋಜನೆಯನ್ನು ಹಿಂಪಡೆಯಬಹುದು. ಯೋಜನೆಯನ್ನು ಕೈಬಿಡುವವರೆಗೂ ಅವರನ್ನು ನಗರಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗದು ಎಂದು ಹೇಳಿದರು.

ಪಶ್ಚಿಮ ಘಟ್ಟ ಸಂರಕ್ಷಣಾ ಹೋರಾಟ ಸಮಿತಿಯ ಕೆ.ಎನ್. ಸೋಮಶೇಖರ್, ನೇತ್ರಾವತಿ ಸಂರಕ್ಷಣಾ ಹೋರಾಟ ಸಮಿತಿಯ ಹರಿಕೃಷ್ಣ ಬಂಟ್ವಾಳ್, ದಿನಕರ್ ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು, ಸತ್ಯಜಿತ್ ಸುರತ್ಕಲ್, ಜಿತೇಂದ್ರ ಕೊಟ್ಟಾರಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News