ಇಡಿಯಿಂದ 1411 ಕೋಟಿ ರೂ. ವೌಲ್ಯದ ಮಲ್ಯ ಆಸ್ತಿ ಮುಟ್ಟುಗೋಲು
ಮುಂಬೈ,ಜೂ.11: ಐಡಿಬಿಐ ಬ್ಯಾಂಕ್‌ಗೆ ಸಾಲ ಮರುಪಾವತಿಸದ ಪ್ರಕರಣಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (ಇಡಿ) ಮದ್ಯ ದೊರೆ ವಿಜಯ್ ಮಲ್ಯ ಅವರ 1411 ಕೋಟಿ ರೂ. ವೌಲ್ಯದ ಆಸ್ತಿಗಳನ್ನು ಶನಿವಾರ ಮುಟ್ಟುಗೋಲು ಹಾಕಿದೆ. ‘‘ ವಿಜಯ್‌ಮಲ್ಯ ಹಾಗೂ ಯುಬಿ ಲಿಮಿಟೆಡ್ ಸಂಸ್ಥೆಗೆ ಸೇರಿದ 1,411 ಕೋಟಿ ರೂ. ವೌಲ್ಯದ ಸೊತ್ತುಗಳನ್ನು ಕಪ್ಪುಹಣ ಬಿಳುಪುಗೊಳಿಸುವಿಕೆ ತಡೆ ಕಾಯ್ದೆಯಡಿ ಮುಟ್ಟುಗೋಲು ಹಾಕಲಾಗಿದೆ’’ ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಟ್ಟುಗೋಲು ಹಾಕಲಾದ ಸೊತ್ತುಗಳಲ್ಲಿ 34 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್, ಬೆಂಗಳೂರು ಹಾಗೂ ಮುಂಬೈನಲ್ಲಿ ಇರುವ ತಲಾ ಒಂದು ಫ್ಲಾಟ್, ಚೆನ್ನೈನಲ್ಲಿರುವ 4.5 ಎಕರೆ ವಿಸ್ತೀರ್ಣದ ಕೈಗಾರಿಕಾ ನಿವೇಶನ, ಕೊಡಗಿನಲ್ಲಿರುವ ಕಾಫಿತೋಟ (28.75 ಎಕರೆ) ಹಾಗೂ ಬೆಂಗಳೂರಿನ ಯುಬಿಸಿಟಿ ಹಾಗೂ ಕಿಂಗ್‌ಫಿಶರ್ ಟವರ್‌ನಲ್ಲಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿತ ಪ್ರದೇಶಗಳು ಸೇರಿವೆ.
ಮಲ್ಯ ಅವರು ಐಡಿಬಿಐ ಬ್ಯಾಂಕ್‌ಗೆ 900 ಕೋಟಿ ರೂ. ಸಾಲ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿ ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಲಾಗಿದೆ. ಈಗ ಸ್ಥಗಿತಗೊಂಡಿರುವ ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆಯು 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ವಿವಿಧ ಬ್ಯಾಂಕ್‌ಗಳಿಗೆ ಮರುಪಾವತಿಸದೆ ವಂಚನೆಯೆಸಗಿದೆ. ಸುಸ್ತಿದಾರರಾಗಿರುವ ಮಲ್ಯ ಅವರು ಮಾರ್ಚ್2ರಂದು ಭಾರತವನ್ನು ತೊರೆದಿದ್ದರು.
ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯವು ಕಪ್ಪು ಹಣ ಬಿಳುಪುಗೊಳಿಸಿದ ಪ್ರಕರಣವನ್ನು ದಾಖಲಿಸಿದೆ. ಸಾಲವನ್ನು ಪಡೆದುಕೊಳ್ಳುವುದಕ್ಕಾಗಿ ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಸ್ಥೆಯು ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಲಂಚವನ್ನು ನೀಡಿರುವ ಸಾಧ್ಯತೆಯ ಬಗ್ಗೆಯೂ ತನಿಖೆಯನ್ನು ನಡೆಸುತ್ತಿದೆ. ಮಲ್ಯ ವಿರುದ್ಧ ಇಂಟರ್‌ಪೋಲ್‌ನಿಂದ ಬಂಧನ ವಾರಂಟ್ ಜಾರಿ ಹಾಗೂ ಅವರ ಪಾಸ್‌ಪೋರ್ಟ್ ರದ್ದುಪಡಿಸಲು ನಡೆಸಿದ ಎಲ್ಲ ಕಾನೂನು ಪ್ರಯತ್ನಗಳು ವಿಫಲವಾದ ಬಳಿಕ ಜಾರಿ ನಿರ್ದೇಶನಾಲಯವು ಮಲ್ಯ ಅವರನ್ನು ಘೋಷಿತ ಅಪರಾಧಿಯೆಂದು ಸಾರುವಂತೆ ಕೋರಿ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದೆ.
ಮಲ್ಯ ಅವರನ್ನು ಬ್ರಿಟನ್‌ನಿಂದ ಗಡಿಪಾರು ಮಾಡಿಸಲು ಭಾರತ-ಬ್ರಿಟನ್ ಪರಸ್ಪರ ಕಾನೂನು ಸಹಕಾರ ಒಪ್ಪಂದ (ಎಂಎಲ್‌ಎಟಿ)ವನ್ನು ಪ್ರಯೋಗಿಸಬೇಕೆಂದು ಜಾರಿ ನಿರ್ದೇಶನಾಲಯವು ಕೇಂದ್ರಕ್ಕೆ ಮನವಿ ಮಾಡಿದೆ.