ನಿರ್ಧಾರವಿಲ್ಲದೆ ಕೊನೆಗೊಂಡ ಸಭೆ
ವಿಯನ್ನ, ಜೂ. 11: ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಸೇರ್ಪಡೆಗೊಳಿಸಬೇಕೆಂದು ಕೋರಿ ಭಾರತ ಸಲ್ಲಿಸಿರುವ ಅರ್ಜಿಯ ಬಗ್ಗೆ ನಿರ್ಧರಿಸಲು ಇಲ್ಲಿ ನಡೆದ ಗುಂಪಿನ ಎರಡು ದಿನಗಳ ಸಮಾವೇಶವು ಇಂದು ಯಾವುದೇ ನಿರ್ಧಾರವಿಲ್ಲದೆ ಕೊನೆಗೊಂಡಿದೆ.
ಸಿಯೋಲ್‌ನಲ್ಲಿ ಜೂನ್ 20ರಂದು ನಡೆಯಲಿರುವ ಇನ್ನೊಂದು ಸಭೆಯಲ್ಲಿ ಭಾರತದ ಅರ್ಜಿಯನ್ನು ಮತ್ತೊಮ್ಮೆ 48 ಸದಸ್ಯರ ಎನ್‌ಎಸ್‌ಜಿ ಕೈಗೆತ್ತಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಸೂಕ್ಷ್ಮ ಪರಮಾಣು ತಂತ್ರಜ್ಞಾನ ವ್ಯಾಪಾರವನ್ನು ನಿಯಂತ್ರಿಸುವ ದೇಶಗಳ ಕೂಟಕ್ಕೆ ಸೇರುವ ಭಾರತದ ಪ್ರಯತ್ನಗಳನ್ನು ಅಮೆರಿಕ ಪ್ರಬಲವಾಗಿ ಬೆಂಬಲಿಸಿದೆ. ಅಮೆರಿಕದ ಬೆಂಬಲದ ಹಿನ್ನೆಲೆಯಲ್ಲಿ, ಭಾರತಕ್ಕೆ ಸದಸ್ಯತ್ವ ನೀಡುವುದನ್ನು ವಿರೋಧಿಸುತ್ತಿದ್ದ ಹಲವು ದೇಶಗಳು ಗುರುವಾರ ತಮ್ಮ ನಿಲುವನ್ನು ಬದಲಾಯಿಸಿ ರಾಜಿ ಸೂತ್ರವೊಂದಕ್ಕೆ ಬರುವ ಇಂಗಿತವನ್ನು ವ್ಯಕ್ತಪಡಿಸಿದವು. ಆದರೆ, ಚೀನಾ ಮಾತ್ರ ತನ್ನ ಪ್ರಬಲ ವಿರೋಧವನ್ನು ಮುಂದುವರಿಸಿತು.
ಪರಮಾಣು ಪೂರೈಕೆದಾರರ ಗುಂಪು ಪರಮಾಣು ಅಸ್ತ್ರಗಳ ಪ್ರಸರಣವನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಪರಮಾಣು ಅಸ್ತ್ರಗಳ ನಿರ್ಮಾಣದಲ್ಲಿ ಬಳಸಬಹುದಾದ ವಸ್ತುಗಳ ಮಾರಾಟವನ್ನು ಅದು ನಿರ್ಬಂಧಿಸುತ್ತದೆ. 1974ರಲ್ಲಿ ಭಾರತ ನಡೆಸಿದ ಮೊದಲ ಪರಮಾಣು ಪರೀಕ್ಷೆಯ ಹಿನ್ನೆಲೆಯಲ್ಲಿ ಗುಂಪನ್ನು ರಚಿಸಲಾಗಿತ್ತು.
ಆದರೆ, ಭಾರತ ಎನ್‌ಎಸ್‌ಜಿಯ ಸದಸ್ಯತ್ವ ಪಡೆಯದೆಯೇ ಸದಸ್ಯತ್ವದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದೆ. ಅಮೆರಿಕದ ಜೊತೆಗಿನ ಅದರ ಪರಮಾಣು ಸಹಕಾರ ಒಪ್ಪಂದವನ್ನು ಬೆಂಬಲಿಸುವುದಕ್ಕಾಗಿ 2008ರಲ್ಲಿ ಎನ್‌ಎಸ್‌ಜಿ ನಿಯಮಗಳಿಂದ ಭಾರತಕ್ಕೆ ವಿನಾಯಿತಿ ನೀಡಲಾಗಿತ್ತು.
ಭಾರತ ಈಗಾಗಲೇ ಪರಮಾಣು ಅಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ ಹಾಗೂ ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಸಹಿ ಹಾಕಿಲ್ಲ.
ಭಾರತಕ್ಕೆ ಸದಸ್ಯತ್ವ ನೀಡುವುದನ್ನು ಆರಂಭದಲ್ಲಿ ವಿರೋಧಿಸುತ್ತಿದ್ದ ದಕ್ಷಿಣ ಆಫ್ರಿಕ, ನ್ಯೂಝಿಲ್ಯಾಂಡ್ ಮತ್ತು ಟರ್ಕಿ ತಮ್ಮ ನಿಲುವುಗಳನ್ನು ಮೆದುಗೊಳಿಸಿದವು ಎಂದು ರಾಜತಾಂತ್ರಿಕರು ಹೇಳಿದ್ದಾರೆ.
ಮೆಕ್ಸಿಕೊ, ಇಟಲಿಯ ಬೆಂಬಲ ಕೋರಿದ ಪಾಕ್
ಇಸ್ಲಾಮಾಬಾದ್, ಜೂ. 11: ಪರಮಾಣು ಪೂರೈಕೆದಾರರ ಗುಂಪಿನ ಸದಸ್ಯತ್ವ ಪಡೆಯುವ ವಿಷಯದಲ್ಲಿ ಭಾರತದೊಂದಿಗೆ ಸ್ಪರ್ಧೆಗೆ ಇಳಿದಿರುವ ಪಾಕಿಸ್ತಾನ, ತನ್ನ ಪ್ರಯತ್ನಗಳಿಗೆ ಬೆಂಬಲ ನೀಡುವಂತೆ ಮೆಕ್ಸಿಕೊ ಮತ್ತು ಇಟಲಿಗಳಿಗೆ ಮನವಿ ಮಾಡಿದೆ.
‘‘ಎನ್‌ಎಸ್‌ಜಿ ಸದಸ್ಯತ್ವ ಕೋರಿ ಪಾಕಿಸ್ತಾನ ಸಲ್ಲಿಸಿರುವ ಅರ್ಜಿಗೆ ಬೆಂಬಲ ಕ್ರೋಢೀಕರಿಸುವ ಪಾಕಿಸ್ತಾನದ ರಾಜತಾಂತ್ರಿಕ ಪ್ರಯತ್ನಗಳ ಭಾಗವಾಗಿ ಪ್ರಧಾನಿಯ ವಿದೇಶ ವ್ಯವಹಾರಗಳ ಕುರಿತ ಸಲಹಾಕಾರ ಸರ್ತಾಝ್ ಅಝೀಝ್ ಮೆಕ್ಸಿಕೊದ ವಿದೇಶಾಂಗ ಸಚಿವೆ ಕ್ಲಾಡಿಯಾ ರುಯಿಝ್ ಮ್ಯಾಸೊ ಜೊತೆಗೆ ಫೋನ್‌ನಲ್ಲಿ ಮಾತಾನಾಡಿದರು’’ ಎಂದು ವಿದೇಶ ಕಚೇರಿಯ ಹೇಳಿಕೆಯೊಂದು ತಿಳಿಸಿದೆ.
ಮೆಕ್ಸಿಕೊ ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಈಗಾಗಲೇ ಬೆಂಬಲ ನೀಡಿರುವುದನ್ನು ಸ್ಮರಿಸಬಹುದು.‘‘ಸರ್ತಾಝ್ ಅಝೀಝ್ ಇಟಲಿ ವಿದೇಶ ಸಚಿವ ಪವೊಲೊ ಜಂಟಿಲಿಯೋನಿ ಯೊಂದಿಗೂ ಫೋನ್‌ನಲ್ಲಿ ಮಾತನಾಡಿದ ಪಾಕಿಸ್ತಾನದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಬೆಂಬಲ ಕೋರಿದರು’’ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯದ ವಕ್ತಾರರೊಬ್ಬರು ಟ್ವೀಟ್ ಮಾಡಿದ್ದಾರೆ.
ಭಾರತದ ಸದಸ್ಯತ್ವಕ್ಕೆ ಇಟಲಿಯೂ ಈಗಾಗಲೇ ಬೆಂಬಲ ನೀಡಿದೆ.