ಐವರು ಸಂಸದರಿಗೆ ಸಂಸದ್ ರತ್ನ ಪ್ರಶಸ್ತಿ ಗರಿ

Update: 2016-06-11 18:11 GMT

ಚೆನ್ನೈ, ಜೂ.11: ಈ ವರ್ಷ ಪ್ರತಿಷ್ಠಿತ ಸಂಸದ ರತ್ನ ಪ್ರಶಸ್ತಿಗೆ ಪಾತ್ರರಾಗಿರುವ ಐವರು ಸಂಸದರಲ್ಲಿ ನಾಲ್ವರು ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದವರು.
ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ನಡೆಯಿತು. ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಸಿ.ರಂಗರಾಜನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಪ್ರೈಂ ಪಾಯಿಂಟ್ ಪೌಂಡೇಷನ್ ಮತ್ತು ಎಮೆಗನೈಸ್ ಪ್ರಿಸೀನ್ ಈ ಪ್ರಶಸ್ತಿಯನ್ನು ಆರಂಭಿಸಿದ್ದು, ವರ್ಷಕ್ಕೆ ಐವರು ಲೋಕಸಭಾ ಸಂಸದರು ಹಾಗೂ ಒಬ್ಬ ರಾಜ್ಯಸಭಾ ಸದಸ್ಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತವೆ.
ರಾಜಸ್ಥಾನದ ಪಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದ ಪಿ.ಪಿ.ಚೌಧರಿ, ನಂದೂರ್‌ಬರ್ ಸಂಸದ ಬಿಜೆಪಿಯ ಹೀನಾ ವಿಜಯಕುಮಾರ್ ಗವಿಟ್, ಮಾವಲ್‌ನ ಶಿವಸೇನಾ ಸಂಸದ ಶ್ರೀರಂಗ್ ಅಪ್ಪಾರಾವ್ ಬಾರ್ನೆ, ಹಿಂಗೋಲಿಯ ಕಾಂಗ್ರೆಸ್ ಸಂಸದ ರಾಜೀವ್ ಶಂಕರರಾವ್ ಸಾತವ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರೆಲ್ಲರೂ ಮಹಾರಾಷ್ಟ್ರದವರಾಗಿದ್ದು, ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದವರು.
ಮಹಾರಾಷ್ಟ್ರದ ಶಿರೂರ್ ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾದ ಶಿವಸೇನಾ ಸಂಸದ ಶಿವಾಜಿರಾವ್, ಆದಲ್‌ರಾವ್ ಪಾಟೀಲ್, ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಕೇರಳ ಸಿಪಿಐಎಂ ನಾಯಕ ಪಿ.ರಾಜೀವ್ ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸಲಹೆ ಮೇರೆಗೆ ಈ ಪ್ರಶಸ್ತಿ ಆರಂಭಿಸಲಾಗಿದ್ದು, ಕ್ಷಮತೆಗಾಗಿ ಉತ್ತಮ ಸಂಸದರನ್ನು ನಾಗರಿಕ ಸಮಾಜ ಗೌರವಿಸಬೇಕು ಎಂದು ಅವರು ಸೂಚಿಸಿದ್ದರು. ಸಂಸದರ ಆಯ್ಕೆಗೆ ಉನ್ನತ ಮಟ್ಟದ ಆಯ್ಕೆ ಸಮಿತಿ ಇದ್ದು, ಈ ಸಮಿತಿಯಲ್ಲಿ ಕೇಂದ್ರ ಸಚಿವ ಹಂಸರಾಜ್ ಜಿ.ಅಹಿರ್, ಬಿಜೆಪಿ ಮುಖ್ಯ ವಿಪ್ ಅರ್ಜುನ್‌ರಾವ್ ಮೇಘವಾಲ್ ಹಾಗೂ ಐದು ಬಾರಿಯ ಸಂಸದರಾದ ಆನಂದರಾವ್ ಅದ್‌ಸಲ್ ಇದ್ದಾರೆ.
ಇವರಿಗೆ ನೀಡಿದ ಗೌರವಪತ್ರಗಳಲ್ಲಿ, ಹಲವು ಚರ್ಚೆಗಳಲ್ಲಿ ಅವರು ಭಾಗವಹಿಸಿದ್ದನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಿದ್ದು, 300-500 ಪ್ರಶ್ನೆಗಳನ್ನು ಎತ್ತಿದ್ದು ಹಾಗೂ ಸಂಸತ್ತಿನ ಕಲಾಪದಲ್ಲಿ ಅತಿಹೆಚ್ಚು ಹಾಜರಾತಿ ಇರುವುದನ್ನು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News